ಶಿಮ್ಲಾ: ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಕಾನೂನನ್ನು ಮತ್ತೆ ಜಾರಿಗೆ ತರಬೇಕೆಂಬ ತಮ್ಮ ಹೇಳಿಕೆಯನ್ನು ನಟಿ ಹಾಗೂ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ಹಿಂಪಡೆದಿದ್ದು, ಇದು ನನ್ನ ವೈಯಕ್ತಿಯ ಅಭಿಪ್ರಾಯ, ಪಕ್ಷದ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚಿಗೆ ಕೃಷಿ ಕಾನೂನುಗಳ ಕುರಿತು ಮಾತನಾಡಿದ್ದ ಅವರು, ಕೇಂದ್ರ ಸರ್ಕಾರ ಹಿಂಪಡೆದ ಕೃಷಿ ಕಾನೂನನ್ನು ರೈತರ ಹಿತಾಸಕ್ತಿಗೆ ಅಡ್ಡಿಯಾಗದಂತೆ ಮತ್ತೆ ಜಾರಿಗೆ ತರಬೇಕು ಎಂದು ಹೇಳಿದ್ದರು. ಈ ಹೇಳಿಕೆ ಟೀಕೆಗೆ ಗುರಿಯಾಗಿತ್ತು. ಬಿಜೆಪಿ ನಾಯಕರು ಕೂಡಾ ಕಂಗನಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದರು.
ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, 'ಕೃಷಿ ಕಾನೂನು ಕುರಿತ ನನ್ನ ಹೇಳಿಕೆ ವೈಯಕ್ತಿಕ. ಈ ಕಾನೂನಿನ ಪರವಾಗಿ ಪಕ್ಷ ಇದೆ ಎಂದು ಬಿಂಬಿಸಬೇಡಿ. ನನ್ನ ಮಾತು ಮತ್ತು ಅಭಿಪ್ರಾಯದಿಂದ ಯಾರನ್ನಾದರೂ ನೋಯಿಸಿದ್ದರೆ ವಿಷಾದಿಸುತ್ತೇನೆ. ನನ್ನ ಮಾತುಗಳನ್ನು ಹಿಂಪಡೆಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ.
ಮಂಗಳವಾರ ಮಂಡಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, "ಕೇಂದ್ರ ಸರ್ಕಾರ ಹಿಂಪಡೆದಿದ್ದ ಕೃಷಿ ಕಾನೂನಿನ ವಿರುದ್ಧ ಕೆಲವೇ ರಾಜ್ಯಗಳಲ್ಲಿ ಮಾತ್ರ ಪ್ರತಿಭಟನೆ ನಡೆದಿತ್ತು. ಭಾರತದ ಪ್ರಗತಿಯಲ್ಲಿ ರೈತರು ಆಧಾರಸ್ತಂಭವಾಗಿದ್ದಾರೆ. ರೈತರ ಹಿತಾಸಕ್ತಿಯಿಂದ ಕೃಷಿ ಕಾನೂನನ್ನು ಮತ್ತೆ ಜಾರಿಗೆ ತರಬೇಕೆಂದು ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ" ಎಂದಿದ್ದರು.