ಕರ್ನಾಟಕ

karnataka

ETV Bharat / bharat

ತಮಿಳುನಾಡು ನಕಲಿ ಮದ್ಯ ದುರಂತ; ಮೂವರು ಮಾರಾಟಗಾರರ ವಿರುದ್ಧ ಕೊಲೆ ಕೇಸ್​ ದಾಖಲು - hooch drank case - HOOCH DRANK CASE

ತಮಿಳುನಾಡಿನ ಕಲ್ಲಕುರಿಚಿಯಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. ಘಟನೆ ಕಾರಣವಾದ ಮೂವರ ವಿರುದ್ಧ ಕೊಲೆ ಕೇಸ್ ದಾಖಲಿಸಲಾಗಿದೆ.

ನಕಲಿ ಮದ್ಯ ಕೇಸಲ್ಲಿ ಮೂವರ ವಿರುದ್ಧ ಕೊಲೆ ಕೇಸ್​ ದಾಖಲು
ನಕಲಿ ಮದ್ಯ ಕೇಸಲ್ಲಿ ಮೂವರ ವಿರುದ್ಧ ಕೊಲೆ ಕೇಸ್​ ದಾಖಲು (ETV Bharat)

By ETV Bharat Karnataka Team

Published : Jun 22, 2024, 10:55 PM IST

ಚೆನ್ನೈ (ತಮಿಳುನಾಡು):ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಮದ್ಯ ಮಾರಾಟ ಮಾಡಿದ ಮೂವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ಮೆಥೆನಾಲ್ ಮಿಶ್ರಿಣವಾದ ಮದ್ಯವನ್ನು 180 ಕ್ಕೂ ಹೆಚ್ಚು ಮಂದಿ ಕುಡಿದಿದ್ದಾರೆ. ಇದರಿಂದ ವಾಂತಿ, ಬೇಧಿ ಉಂಟಾಗಿ ಅವರನ್ನು ಕಲ್ಲಕುರಿಚಿ, ಸೇಲಂ, ವಿಲ್ಲುಪುರಂ ಸರ್ಕಾರಿ ಆಸ್ಪತ್ರೆಗಳು ಮತ್ತು ಪಾಂಡಿಚೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ 54 ಮಂದಿ ಸಾವನ್ನಪ್ಪಿದ್ದು, 148 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.

ವಿಲ್ಲುಪುರಂ ಜಿಲ್ಲೆಯ ಗ್ರಾಮವೊಂದರ ಯುವಕರಾದ ಪ್ರವೀಣ್ ಮತ್ತು ಜಗದೀಶ್ 3 ದಿನಗಳ ಹಿಂದೆ ಕಲ್ಲಕುರಿಚಿಗೆ ತೆರಳಿ ನಕಲಿ ಮದ್ಯವನ್ನು ಖರೀದಿಸಿ ಕುಡಿದಿದ್ದರು. ಕಳೆದ 2 ದಿನಗಳಿಂದ ಅವರು ಹೊಟ್ಟೆನೋವಿನಿಂದ ಬಳಲುತ್ತಿದ್ದು, ಮೆಡಿಕಲ್ ಶಾಪ್​ನಲ್ಲಿ ಔಷಧಿ ಪಡೆದು ಸೇವಿಸುತ್ತಿದ್ದರು. ಇದೀಗ, ಇಬ್ಬರ ಸ್ಥಿತಿ ತೀವ್ರ ಹದಗೆಟ್ಟಿದೆ. ಅವರನ್ನು ವಿಲ್ಲುಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ಕೇಸ್​​ ದಾಖಲು:ಕಲ್ಲಕುರಿಚಿಯಲ್ಲಿ ನಕಲಿ ಮದ್ಯ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 54 ಜನರ ಸಾವಿಗೆ ಕಾರಣವಾದ ಮೂವರ ವಿರುದ್ಧ ಕೊಲೆ ಕೇಸ್​ ದಾಖಲಿಸಲಾಗಿದೆ. ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದೆ. ರಾಮ್, ಚಿನ್ನದೊರೈ ಮತ್ತು ಜೋಸೆಫ್ ರಾಜಾ ವಿರುದ್ಧ ಮದ್ಯದಲ್ಲಿ ಮೆಥೆನಾಲ್‌ ಬೆರೆಸಿದ ಆರೋಪದ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ಕಲ್ಲಕುರಿಚಿ ದುರಂತ ಪ್ರಕರಣದಲ್ಲಿ ಮೃತಪಟ್ಟ 39 ಮಂದಿಯ ಶವಗಳನ್ನು ಸುಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ತಿಳಿಸಿದ್ದಾರೆ.

ಅಧಿಕಾರಿಗಳ ವರ್ಗಾವಣೆ:ಇಡೀ ತಮಿಳುನಾಡನ್ನು ಬೆಚ್ಚಿ ಬೀಳಿಸಿರುವ ಈ ಘಟನೆ ಬಳಿಕ ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣಕುಮಾರ್ ಜಾದವತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಎಂಎಸ್ ಪ್ರಶಾಂತ್ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಸರ್ಕಾರ ಆದೇಶ ಮಾಡಿದೆ.

ತಲಾ 10 ಲಕ್ಷ ರೂ. ಪರಿಹಾರ:ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಅಸುನೀಗಿದವರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ:ನಕಲಿ ಮದ್ಯ ಸೇವಿಸಿ 35 ಮಂದಿ ದುರ್ಮರಣ : 20 ಜನರ ಸ್ಥಿತಿ ಚಿಂತಾಜನಕ - fake liquor consuming case

ABOUT THE AUTHOR

...view details