ನವದೆಹಲಿ:ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಪುತ್ರಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರು ಸಮನ್ಸ್ಗೆ ಸ್ಪಂದಿಸುತ್ತಿಲ್ಲ ಹಾಗೂ ಇಡಿ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಸೋಮವಾರ ಸುಪ್ರೀಂಕೋರ್ಟ್ಗೆ ಹೇಳಿದೆ. ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆಗೆ ಕೆ ಕವಿತಾ ಹಾಜರಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ಗೆ ಇಡಿ ವಿವರಣೆ ನೀಡಿದೆ.
ಈ ಸಂಬಂಧಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರವರಿ 16ಕ್ಕೆ ಮುಂದೂಡಿದೆ. ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಸುಪ್ರೀಂ ಪೀಠದ ಮುಂದೆ ತಮ್ಮ ವಾದ ಮಂಡಿಸಿದರು. ಕವಿತಾ ಅವರು ಸಮನ್ಸ್ಗೆ ಯಾವುದೇ ಉತ್ತರ ನೀಡುತ್ತಿಲ್ಲ ಹಾಗೂ ಜಾರಿ ನಿರ್ದೇಶನಾಲಯದ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಗಮನಕ್ಕೆ ತಂದರು. ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಸಮನ್ಸ್ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುವವರೆಗೆ ಕವಿತಾ ಅವರನ್ನು ವಿಚಾರಣೆಗೆ ಕರೆಯುವುದಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ್ದರು ಎಂಬ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು. ಈ ವೇಳೆ, ಮಧ್ಯ ಪ್ರವೇಶಿಸಿದ ಸಾಲಿಸಿಟರ್ ಜನರಲ್, ಸುಪ್ರೀಂಕೋರ್ಟ್ ವಿಚಾರಣೆ ನಡೆಸುವವರೆಗೂ ಅಲ್ಲ ಮುಂದಿನ ವಿಚಾರಣೆವರೆಗೆ ಮಾತ್ರ ಎಂದು ಹೇಳಲಾಗಿತ್ತು ಎಂದು ಸ್ಪಷ್ಟನೆ ನೀಡಿದರು. ಮುಂದಿನ ವಿಚಾರಣೆಯ ವೇಳೆ ಸಮಸ್ಯೆ ಪರಿಶೀಲಿಸುವುದಾಗಿ ಪೀಠ ಹೇಳಿದೆ.