ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಕರ್ತವ್ಯನಿರತ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ: ಸಿಎಂ ಸ್ಟಾಲಿನ್​ ಕಳವಳ - Tamil nadu reporter Attacked

ತಮಿಳುನಾಡಿನಲ್ಲಿ ಪತ್ರಕರ್ತನ ಮೇಲೆ ದಾಳಿ ನಡೆಸಲಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

By ETV Bharat Karnataka Team

Published : Jan 25, 2024, 5:34 PM IST

ಚೆನ್ನೈ(ತಮಿಳುನಾಡು):ತಮಿಳುನಾಡಿನಲ್ಲಿ ಖಾಸಗಿ ಸುದ್ದಿ ವಾಹಿನಿ ಪತ್ರಕರ್ತನ ಮೇಲೆ ಗುರುವಾರ ಮಾರಣಾಂತಿಕ ದಾಳಿ ನಡೆದಿದೆ. ಘಟನೆಯು ರಾಜ್ಯದಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದ್ದು, ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಪತ್ರಕರ್ತರ ಸಂಘ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ಸಿಎಂ ಎಂಕೆ ಸ್ಟಾಲಿನ್​ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದರ ಪಲ್ಲಡಂ ಮತ್ತು ಸೂಲೂರು ಪ್ರದೇಶದ ವರದಿಗಾರ ನೇಸಪ್ರಭು ಎಂಬುವರ ಮೇಲೆ ಅಪರಿಚಿತರ ಗುಂಪೊಂದು ದಾಳಿ ಮಾಡಿದೆ. ಪತ್ರಕರ್ತರಿಬ್ಬರಿಗೆ ತೀವ್ರ ಗಾಯಗಳಾಗಿದ್ದು, ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆ ವಿರುದ್ಧ ಪ್ರತಿಭಟನೆ:ಕರ್ತವ್ಯನಿರತ ಪತ್ರಕರ್ತರ ಮೇಲೆ ನಡೆದ ಹಲ್ಲೆ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೊಯಮತ್ತೂರು, ಧರ್ಮಪುರಿ ಮತ್ತು ತಿರುವಳ್ಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಮಾಧ್ಯಮ ಮಿತ್ರರು ಸೇರಿದಂತೆ ಪತ್ರಕರ್ತರ ಸಂಘ ಸಹೋದ್ಯೋಗಿಗೆ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಪತ್ರಕರ್ತ ನೇಸಪ್ರಭು ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಮತ್ತು ಬೆದರಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇಷ್ಟಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆರಕ್ಷಕ ದಳದ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಪತ್ರಕರ್ತರ ಸುರಕ್ಷತೆ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ತಮಿಳುನಾಡಿನಾದ್ಯಂತ ಪತ್ರಕರ್ತರು ಕರ್ತವ್ಯದ ವೇಳೆ ಭದ್ರತೆಯ ಭರವಸೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.

ಪೊಲೀಸ್​, ಸರ್ಕಾರದ ವಿರುದ್ಧ ಟೀಕೆ:ಇನ್ನು ಘಟನೆಗೆ ಸಂಬಂಧಿಸಿದಂತೆ ವಿಪಕ್ಷಗಳು ಸರ್ಕಾರ ಮತ್ತು ಪೊಲೀಸ್​ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಅವರು, ಪರಿಸ್ಥಿತಿ ನಿಭಾಯಿಸಲು ತಮಿಳುನಾಡು ಪೊಲೀಸರು ವಿಫಲರಾಗಿದ್ದಾರೆ. ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕು. ಹಲ್ಲೆಗೊಳಗಾದ ಪತ್ರಕರ್ತನಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಸಂಭವನೀಯ ದಾಳಿಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಭದ್ರತಾ ಕ್ರಮದಲ್ಲಿ ಲೋಪವಾದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.

ಸಿಎಂ ಸ್ಟಾಲಿನ್​ ಬೇಸರ:ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ದಾಳಿಕೋರರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು. ದಾಳಿ ನಡೆಯುವ ಬಗ್ಗೆ ದೂರು ನೀಡಿದ್ದರೂ ಭದ್ರತಾ ಕ್ರಮ ವಹಿಸದ ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ತಕ್ಷಣದ ಕ್ರಮಕ್ಕೆ ಆದೇಶಿಸಿದ್ದಾರೆ. ಹಲ್ಲೆಗೊಳಗಾದ ನೇಸಪ್ರಭು ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಪತ್ರಕರ್ತರ ಕಲ್ಯಾಣ ಮಂಡಳಿಯಿಂದ 3 ಲಕ್ಷ ರೂಪಾಯಿ ಧನಸಹಾಯವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಇದನ್ನೂ ಓದಿ:ಬಿಟ್​ಕಾಯಿನ್ ಪ್ರಕರಣ: ಬಂಧಿತ ಇಬ್ಬರು ಪೊಲೀಸ್ ಇನ್ಸ್‌ಪೆಕ್ಟರ್​ಗಳು 6 ದಿನ ಸಿಐಡಿ ಕಸ್ಟಡಿಗೆ

ABOUT THE AUTHOR

...view details