ನವದೆಹಲಿ: ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ - ಮೇನ್‌ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 56 ಅಭ್ಯರ್ಥಿಗಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ರಾತ್ರಿ ಪ್ರಕಟಿಸಿದೆ. 23 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯ ಪ್ರವೇಶಕ್ಕಾಗಿ ಜೆಇಇ (ಅಡ್ವಾನ್ಸ್‌ಡ್) ಪರೀಕ್ಷೆ ನಡೆದಿತ್ತು.
ಜೆಇಇ (ಮೇನ್) ಜನವರಿಯ ಪರೀಕ್ಷೆಯಲ್ಲಿ 23 ಅಭ್ಯರ್ಥಿಗಳು 100ಕ್ಕೆ 100 ಅಂಕ ಗಳಿಸಿದ್ದಾರೆ. ಏಪ್ರಿಲ್ನಲ್ಲಿ ನಡೆದ ಪರೀಕ್ಷೆಯಲ್ಲಿ 33 ಅಭ್ಯರ್ಥಿಗಳು ಈ ಸಾಧನೆ ಮಾಡಿದ್ದಾರೆ. ಒಟ್ಟು 56 ಟಾಪರ್‌ಗಳ ಪೈಕಿ ಸಾಮಾನ್ಯ ವರ್ಗದಿಂದ 40, ಒಬಿಸಿ ವರ್ಗದಿಂದ 10 ಮತ್ತು 'gen-EWS' ವರ್ಗದಿಂದ 6 ಮಂದಿ ಇದ್ದಾರೆ. ಎಸ್ಸಿ ಎಸ್ಟಿ ವರ್ಗಗಳ ಯಾವುದೇ ಅಭ್ಯರ್ಥಿ ಈ ವರ್ಷ 100 ಅಂಕ ಪಡೆಯಲು ಸಾಧ್ಯವಾಗಿಲ್ಲ.
ಪರೀಕ್ಷೆ ಸಮಯದಲ್ಲಿ ಮೋಸದ ಮಾರ್ಗ ಬಳಸಿದ್ದಕ್ಕಾಗಿ, 39 ಅಭ್ಯರ್ಥಿಗಳನ್ನು ಮೂರು ವರ್ಷಗಳ ಕಾಲಕ್ಕೆ ಡಿಬಾರ್ ಮಾಡಲಾಗಿದೆ ಎಂದು ಕೂಡ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 15 ಮಂದಿಯ ಟಾಪ್ ಸ್ಕೋರರ್ ಪಟ್ಟಿಯೊಂದಿಗೆ ತೆಲಂಗಾಣ ಸತತ ಮೂರನೇ ಬಾರಿ ಮುನ್ನಡೆಯಲ್ಲಿದೆ. ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ರಾಜ್ಯಗಳು ತಲಾ 7 ಅಭ್ಯರ್ಥಿಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದಿವೆ. ದೆಹಲಿಯು 6 ಅಭ್ಯರ್ಥಿಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ಕರ್ನಾಟಕದ ಮೂವರು ಟಾಪರ್ಸ್ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಸಾನ್ವಿ ಜೈನ್, ಅಮೋಘ ಅಗರ್ವಾಲ್ ಮತ್ತು ಸಾಯಿ ನವನೀತ್ ಮುಕುಂದ್ ಎಂಬುವವರು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.