ಶ್ರೀನಗರ: 40 ವರ್ಷಗಳ ಚುನಾವಣಾ ಬಹಿಷ್ಕಾರವನ್ನು ಕೊನೆಗೊಳಿಸಿ ಜಮ್ಮು ಮತ್ತು ಕಾಶ್ಮೀರದ ಚುನಾವಣಾ ಆಖಾಡಕ್ಕೆ ಇಳಿದಿರುವ ಜಮಾತೆ ಇಸ್ಲಾಮಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯ ಪರವಾಗಿ ಭಾನುವಾರ ಕುಲ್ಗಾಮ್ ಜಿಲ್ಲೆಯಲ್ಲಿ ಬೃಹತ್ ರ್‍ಯಾಲಿ ನಡೆಸಲಾಯಿತು. ಸಯಾರ್ ಅಹ್ಮದ್ ರೇಶಿ ಅವರು ಕುಲ್ಗಾಮ್ ವಿಧಾನ ಸಭಾ ಕ್ಷೇತ್ರದಲ್ಲಿ ಜಮಾತೆ ಇಸ್ಲಾಮಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯಾಗಿದ್ದು, ಸಿಪಿಐ(ಎಂ)ನ ಎಂ.ವೈ.ತಾರಿಗಾಮಿ ಇವರ ಎದುರಾಳಿಯಾಗಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಈ ಮೈತ್ರಿಕೂಟವು ಕುಲ್ಗಾಮ್ ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
1987ರ ನಂತರ ಇದೇ ಮೊದಲ ಬಾರಿಗೆ ಜಮಾತ್ ಕಾರ್ಯಕರ್ತರು ಜಮಾತ್ನ ಮಾಜಿ ಸದಸ್ಯ ಹಾಗೂ ಸ್ವತಂತ್ರ ಅಭ್ಯರ್ಥಿ ಸಯಾರ್ ಅಹ್ಮದ್ ರೇಶಿ ಪರವಾಗಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ಬುಗಾಮ್ ಪ್ರದೇಶದಲ್ಲಿ ನಡೆದ ರ್‍ಯಾಲಿಯಲ್ಲಿ ಜಮಾತ್ ಪ್ರಾಯೋಜಿತ ಅಭ್ಯರ್ಥಿ ರೇಶಿ ಮಾತನಾಡಿದರು.
ಕಳೆದ ನಾಲ್ಕು ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳು ನಡೆದಾಗಲೆಲ್ಲಾ ಮತದಾನದಿಂದ ದೂರ ಉಳಿದಿದ್ದ ಸಾಮಾಜಿಕ-ಧಾರ್ಮಿಕ ಸಂಘಟನೆಯಾಗಿರುವ ಜಮಾತೆ ಇಸ್ಲಾಮಿಯು 40 ವರ್ಷಗಳ ನಂತರ ಆಯೋಜಿಸಿದ್ದ ಮೊದಲ ರ್‍ಯಾಲಿಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕಾಶ್ಮೀರಿಗಳು ಮತದಾನ ಮಾಡಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾವು ನಂಬಿಕೆ ಇಟ್ಟಿರುವುದನ್ನು ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮಿ ಮತ್ತೆ ರಾಜಕೀಯ ವಲಯಕ್ಕೆ ಪಾದಾರ್ಪಣೆ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ 2019 ರಲ್ಲಿ ಕೇಂದ್ರ ಗೃಹ ಸಚಿವಾಲಯವು ಜಮಾತೆ ಇಸ್ಲಾಮಿಯನ್ನು ನಿಷೇಧಿಸಿದೆ. ಹೀಗಾಗಿ ಸಂಘಟನೆಯ ಮಾಜಿ ಸದಸ್ಯರನ್ನು ಬೆಂಬಲಿಸುವ ಮೂಲಕ ಜಮಾತ್ ರಾಜಕೀಯ ವ್ಯವಸ್ಥೆಗೆ ಮರುಪ್ರವೇಶಿಸಲು ಉದ್ದೇಶಿಸಿದೆ.