ಜಬಲ್ಪುರ, ಮಧ್ಯಪ್ರದೇಶ: ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ಮಧ್ಯಪ್ರದೇಶ ಹೈಕೋರ್ಟ್ ವಿಶಿಷ್ಟವಾದ ಶಿಕ್ಷೆಯನ್ನು ನೀಡಿದೆ. ಇನ್ನು ಮುಂದೆ ಆತನ ಬಾಯಲ್ಲಿ ತಿಂಗಳಲ್ಲಿ ಎರಡು ಕಂತಿನಂತೆ 42 ಬಾರಿ 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆ ಮೊಳಗುವಂತೆ ಮಾಡಿದೆ.
ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ ಎಂಬ ವ್ಯಕ್ತಿ ಪಾಕಿಸ್ತಾನದ ಪರ ಘೋಷಣೆ ಕೂಗಿ ದೇಶದ್ರೋಹದ ಕೃತ್ಯ ಎಸಗಿದ್ದ. ಈತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಇದೀಗ ಆತ ಜಾಮೀನು ಕೋರಿ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದ. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಾಲಿವಾಲ್ ಅವರ ಪೀಠ, ಆರೋಪಿ ತಪ್ಪನ್ನು ಗುರುತಿಸಿದೆ. ಜೊತೆಗೆ, ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಪೊಲೀಸ್ ಠಾಣೆಗೆ ತೆರಳಿ, ರಾಷ್ಟ್ರಧ್ವಜಕ್ಕೆ ವಂದಿಸುವ ಶಿಕ್ಷೆ ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಕೋರ್ಟ್ ವಿಧಿಸಿದ ಷರತ್ತುಗಳಿವು:ಆರೋಪಿ ಫೈಝಲ್ ಅಲಿಯಾಸ್ ಫೈಜಾನ್ 50 ಸಾವಿರ ರೂಪಾಯಿಗಳ ವೈಯಕ್ತಿಕ ಬಾಂಡ್ ಅನ್ನು ಟ್ರಯಲ್ ಕೋರ್ಟ್ಗೆ ಸೂಕ್ತ ಶ್ಯೂರಿಟಿ ಒದಗಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಇಷ್ಟೇ ಅಲ್ಲದೇ, ಫೈಸಲ್ ಭೋಪಾಲ್ ಪೊಲೀಸ್ ಠಾಣೆಗೆ ತಿಂಗಳಿಗೆ ಎರಡು ಬಾರಿ ಹಾಜರಾಗಿ ಅಲ್ಲಿನ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಬೇಕು ಹಾಗೂ 21 ಬಾರಿ 'ಭಾರತ್ ಮಾತಾ ಕಿ ಜೈ' ಘೋಷಣೆ ಕೂಗುವಂತೆ ಸೂಚಿಸಿದೆ.
ಆರೋಪಿ ಇದನ್ನು ಮುಂದಿನ ವಿಚಾರಣೆಯವರೆಗೂ ಕಡ್ಡಾಯವಾಗಿ ಪಾಲಿಸಬೇಕು. ಆರೋಪಿ ಈ ಷರತ್ತುಗಳನ್ನು ಪೂರೈಸಿದ್ದಾರೋ ಇಲ್ಲವೋ ಎಂಬುದನ್ನು ಭೋಪಾಲ್ ಪೊಲೀಸ್ ಆಯುಕ್ತರು ಮೇಲುಸ್ತುವಾಗಿ ವಹಿಸಬೇಕು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಪಾಕಿಸ್ತಾನಕ್ಕೆ ಜೈ ಎಂದಿದ್ದ ಆರೋಪಿ :ಆರೋಪಿಯು ಪಾಕಿಸ್ತಾನದ ಪರ ಘೋಷಣೆಯನ್ನು ಕೂಗಿದ್ದಾನೆ. ಇದು ಸಮುದಾಯದ ನಡುವೆ ದ್ವೇಷ ಹೊತ್ತಿಸಿದೆ. ಈತನ ಕೃತ್ಯವು ದೇಶದ ಸಾಮರಸ್ಯ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಸವಾಲು ಉಂಟು ಮಾಡಿದೆ. ಹೀಗಾಗಿ ಈತನನ್ನು ಸೆಕ್ಷನ್ 153 ರ ಅಡಿ ಮೇ 17 ರಂದು ಬಂಧಿಸಲಾಗಿತ್ತು. ಆರೋಪಿ ಎಸಗಿದ ತಪ್ಪಿನ ಬಗ್ಗೆ ಸಮಗ್ರ ತನಿಖೆ ನಡೆಸಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ನ್ಯಾಯಾಲಯದ ಗಮನಕ್ಕೆ ತಂದಿತು.
ಆದರೆ, ಪ್ರತಿವಾದಿಯ ವಕೀಲರು ಅರ್ಜಿದಾರರನ ಮೇಲೆ ತಪ್ಪಾಗಿ ಆರೋಪ ಹೊರಿಸಲಾಗಿದೆ ಎಂದು ವಾದಿಸಿದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಆರೋಪಿ ಕೂಗಿದ ಘೋಷಣೆಗಳಿಗೆ ಪೂರಕವಾಗಿ ವಿಡಿಯೋ ದಾಖಲೆಯನ್ನು ಒದಗಿಸಿದರು. ಪ್ರಮಾಣೀಕೃತ ವಿಡಿಯೋದಲ್ಲಿ ಆರೋಪಿಯ ಧ್ವನಿಯೂ ಸ್ಪಷ್ಟವಾಗಿ ಕೇಳಿಸಿದ್ದನ್ನು ನ್ಯಾಯಮೂರ್ತಿಗಳು ಗಮನಿಸಿದರು. ಜೊತೆಗೆ ಆರೋಪಿ ವಿರುದ್ಧ 14 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದೂ ಪೀಠಕ್ಕೆ ತಿಳಿಸಲಾಯಿತು. ವಾದ-ಪ್ರತಿವಾದ ಆಲಿಸಿ ಕೋರ್ಟ್ ಆರೋಪಿಗೆ ಷರತ್ತುಬದ್ಧ ಜಾಮೀನು ದಯ ಪಾಲಿಸಿತು.
ಇದನ್ನು ಓದಿ:ಸಿಜೆಐ ಚಂದ್ರಚೂಡ್ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಖನ್ನಾ ಹೆಸರು ಪ್ರಸ್ತಾಪ