ಇಂಧೋರ್ (ಮಧ್ಯಪ್ರದೇಶ):ವ್ಯಕ್ತಿಯೊಬ್ಬ ನಕಲಿ ದಾಖಲೆಗಳನ್ನು ಕೊಟ್ಟು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)ನಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿರುವ ಮಹಾ ವಂಚನೆಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಮಥುರಾದ ವ್ಯಕ್ತಿಯೊಬ್ಬ ಪರ್ವತ್ ಆದಿವಾಸಿ ಎಂದು ಹೇಳಿಕೊಂಡು ಐಟಿಬಿಪಿಯಲ್ಲಿ ಜವಾನ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮಧ್ಯಪ್ರದೇಶದ ದಮೋಹ್ ಜಿಲ್ಲೆಯ ನಿವಾಸಿ ಎಂದು ದಾಖಲೆಗಳನ್ನು ಸಲ್ಲಿಸಿದ್ದ. ಮನೆಗೆ ಭೇಟಿ ನೀಡುವ ಸಲುವಾಗಿ ರಜೆ ತೆಗೆದುಕೊಂಡಿದ್ದ ಆರೋಪಿ, ಹಲವು ತಿಂಗಳು ಕಳೆದರೂ ಕೆಲಸಕ್ಕೆ ವಾಪಸ್ ಆಗಿರಲಿಲ್ಲ. ದೀರ್ಘಕಾಲ ಗೈರುಹಾಜರಾದ ಕಾರಣ ಆರೋಪಿ ನೀಡಿದ ನಕಲಿ ವಿಳಾಸಕ್ಕೆ ನೋಟಿಸ್ ಕಳುಹಿಸಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಇದಾದ ನಂತರ, ಐಟಿಬಿಪಿ ಆತನನ್ನು ಬಂಧಿಸುವಂತೆ ದಾಮೋಹ್ ಪೊಲೀಸರಿಗೆ ಪತ್ರ ಬರೆದಿತ್ತು. ಆದರೆ ದಾಮೋಹ್ ಪೊಲೀಸರಿಗೆ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬಳಿಕ ಆತನ ಪತ್ತೆಗೆ ಐಟಿಬಿಪಿ ಜವಾನ್ವೊಬ್ಬರನ್ನು ದಾಮೋಹ್ನ ಪಥರಿಯಾ ಗ್ರಾಮಕ್ಕೆ ಕಳುಹಿಸಿತ್ತು. ಯೋಧ ಆರೋಪಿ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದಾಗ ಪರ್ವತ್ ಆದಿವಾಸಿ ಬೇರೆ ವ್ಯಕ್ತಿ ಮತ್ತು ಇಷ್ಟು ವರ್ಷ ಐಟಿಬಿಪಿಯಲ್ಲಿ ಕೆಲಸ ಮಾಡಿದವನೇ ಬೇರೆ ವ್ಯಕ್ತಿ ಎಂಬ ಅಂಶ ಬೆಳಕಿಗೆ ಬಂದಿದೆ.