ಹೈದರಾಬಾದ್: ಭಾರತೀಯ ನಾಗರೀಕ ಸೇವೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಗಂಡಾಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಅಲ್ಲದೇ, ಅವರ ಮನವಿಗೆ ಕೇಂದ್ರ ಸರ್ಕಾರ ಕೂಡ ಅನುಮತಿಸಿದ್ದು, ಇದೀಗ ಮಹಿಳಾ ಅಧಿಕಾರಿಯ ಅಧಿಕೃತ ದಾಖಲೆಗಳಲ್ಲಿ ಅವರ ಇಚ್ಛೆಯಂತೆಯೇ ಹೆಸರು, ಲಿಂಗವನ್ನು ಬದಲಾಯಿಸಲಾಗಿದೆ.
ಈ ಅಧಿಕಾರಿ ಹೈದರಾಬಾದ್ನ ಕಸ್ಟಮ್ಸ್, ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಸಿಇಎಸ್ಟಿಎಟಿ) ಪ್ರಾದೇಶಿಕ ಪೀಠದಲ್ಲಿ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಪೂರ್ಣ ವಿವರ: 35 ವರ್ಷದ ಅನುಸೂಯ ಎಂಬ ಐಆರ್‌ಎಸ್ ಅಧಿಕಾರಿ, "ತಾವು ಮಹಿಳೆಯಿಂದ ಪುರುಷನಾಗಿ ಲಿಂಗ ಪರಿವರ್ತನೆಗೆ ಒಳಗಾಗುತ್ತಿದ್ದೇನೆ. ನನ್ನ ಹೆಸರನ್ನು ಎಲ್ಲಾ ದಾಖಲೆಗಳಲ್ಲಿ ಅನುಸೂಯ ಎನ್ನುವುದರ ಬದಲಾಗಿ 'ಅನುಕತಿರ್ ಸೂರ್ಯ' ಎಂದೂ ಹಾಗು ಲಿಂಗ 'ಪುರುಷ' ಎಂದು ಬದಲಾವಣೆ ಮಾಡಬೇಕು" ಎಂದು ವಿತ್ತ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿರುವ ಸಚಿವಾಲಯ, ಇದೀಗ ಅವರ ಹೆಸರ ಎಲ್ಲಾ ಅಧಿಕೃತ ದಾಖಲಾತಿಗಳಲ್ಲಿ ಬದಲಾಯಿಸಿ ಜುಲೈ 9ರಂದು ಆದೇಶ ಹೊರಡಿಸಿದೆ.