ಪ್ರತೀ ವರ್ಷ ಏಪ್ರಿಲ್ 5 ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನವನ್ನು (International Day of Conscience) ಆಚರಿಸಲಾಗುತ್ತದೆ. 'ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯನ್ನು ಉತ್ತೇಜಿಸುವ' ಥೀಮ್ನೊಂದಿಗೆ ಈ ಸಾಲಿನ ಆತ್ಮಸಾಕ್ಷಿ ದಿನವನ್ನು ಸೆಲೆಬ್ರೇಟ್ ಮಾಡಲಾಗುತ್ತಿದೆ.
ಈ ಅಂತಾರಾಷ್ಟ್ರೀಯ ಆತ್ಮಸಾಕ್ಷಿಯ ದಿನವು ಮಾನವನ ಆತ್ಮಸಾಕ್ಷಿಯ ಪ್ರಾಮುಖ್ಯತೆ ಸ್ಮರಿಸುವುದಕ್ಕಾಗಿ ಆಚರಿಸಲಾಗುವ ಜಾಗೃತಿಯ ದಿನ ಕೂಡ ಹೌದು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜುಲೈ 2019ರ 25ರಂದು ಪ್ರೀತಿ ಮತ್ತು ಆತ್ಮಸಾಕ್ಷಿಯೊಂದಿಗೆ ಶಾಂತಿಯ ಸಂಸ್ಕೃತಿ ಉತ್ತೇಜಿಸುವ ನಿರ್ಣಯವನ್ನು ಅಂಗೀಕರಿಸುವುದರೊಂದಿಗೆ ಈ ದಿನವನ್ನು ಘೋಷಿಸಿತು.
ಹಿನ್ನೆಲೆ:ಶಾಂತಿಯ ಸಂಸ್ಕೃತಿಯ ಪರಿಕಲ್ಪನೆಯು ಜುಲೈ 1989ರಲ್ಲಿ ಯುನೆಸ್ಕೋ ಆಯೋಜಿಸಿದ್ದ 'ಇಂಟರ್ನ್ಯಾಷನಲ್ ಕಾಂಗ್ರೆಸ್ ಆನ್ ಪೀಸ್ ಇನ್ ದಿ ಮೈಂಡ್ಸ್ ಆಫ್ ಮೆನ್'ನಿಂದ ಹೊರಹೊಮ್ಮಿತು. ನಂತರ, 2019ರ ಫೆಬ್ರವರಿ 5ರಂದು ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಆತ್ಮಸಾಕ್ಷಿ ದಿನದ ಘೋಷಣೆಗಾಗಿ ಜಾಗತಿಕ ಅಭಿಯಾನವನ್ನು ಫೆಡರೇಶನ್ ಆಫ್ ವರ್ಲ್ಡ್ ಪೀಸ್ ಅಂಡ್ ಲವ್ (FOWPAL) ಪ್ರಾರಂಭಿಸಿತು.
ಫೆಡರೇಶನ್ ಆಫ್ ವರ್ಲ್ಡ್ ಪೀಸ್ ಅಂಡ್ ಲವ್ ಒಂದು ಸರ್ಕಾರೇತರ ಸಂಸ್ಥೆ. ಪ್ರೀತಿ ಮತ್ತು ಶಾಂತಿಯ ಕಲ್ಪನೆಯನ್ನು ಹರಡುವುದೇ ಇದರ ಉದ್ದೇಶ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2019ರಲ್ಲಿ ನಡೆದ ತನ್ನ 73ನೇ ಅಧಿವೇಶನದಲ್ಲಿ ಆತ್ಮಸಾಕ್ಷಿ ಪರಿಕಲ್ಪನೆ ಅಂಗೀಕರಿಸಿ, ಏಪ್ರಿಲ್ 5 ಅನ್ನು ಆತ್ಮಸಾಕ್ಷಿಯ ಅಂತಾರಾಷ್ಟ್ರೀಯ ದಿನ ಎಂದು ಘೋಷಿಸಿತು.