ಮಹಾಕುಂಭ ನಗರ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜುನಾ ಅಖಾಡಾದ ನೂರಕ್ಕೂ ಹೆಚ್ಚು ಮಹಿಳೆಯರಿಗೆ 'ನಾಗ ಸನ್ಯಾಸಿನಿ' ಆಗುವ ದೀಕ್ಷಾ ಪ್ರಕ್ರಿಯೆ ಭಾನುವಾರದಿಂದ ಪ್ರಾರಂಭವಾಗಿದೆ. 'ಪ್ರಸ್ತುತ ದೀಕ್ಷೆಯ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ಹಂತದಲ್ಲಿ 102 ಮಹಿಳೆಯರಿಗೆ ‘ನಾಗ ದೀಕ್ಷೆ’ ನೀಡಲಾಯಿತು' ಎಂದು ಶ್ರೀ ಪಂಚ ದಶನಂ ಜುನಾ ಅಖಾಡದ ಸಂತ ದಿವ್ಯಾ ಗಿರಿ ತಿಳಿಸಿದ್ದಾರೆ.
ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ, ಅವರಿಗೆ ನೀರಿನ ಮಡಕೆ (ಕಮಂಡಲ), ಗಂಗಾ 'ಜಲ್' ಮತ್ತು 'ದಂಡ' (ಕೋಲು)ವನ್ನು ನೀಡಲಾಯಿತು. ದೀಕ್ಷಾ ಪ್ರಕ್ರಿಯೆಯ ಅಂತಿಮ ಭಾಗವನ್ನು ಜುನಾ ಅಖಾಡದ ಆಚಾರ್ಯ ಮಹಾಮಂಡಲೇಶ್ವರ, ಸ್ವಾಮಿ ಅವಧೇಶಾನಂದ ಗಿರಿ ನೆರವೇರಿಸಲಿದ್ದಾರೆ ಎಂದಿದ್ದಾರೆ.
ನಾಗ ಸನ್ಯಾಸಿನಿ ದೀಕ್ಷೆಯಲ್ಲಿ ಮೂವರು ವಿದೇಶಿಯರೂ ಪಾಲ್ಗೊಂಡಿದ್ದು, ಅವರನ್ನು ಶ್ರೀ ಪಂಚ ದಶನಂ ಜುನ ಅಖಾಡದ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ದಿವ್ಯ ಗಿರಿ ತಿಳಿಸಿದ್ದಾರೆ. ಅವರಲ್ಲಿ ಇಟಲಿಯ ಬಂಕಿಯಾ ಮರಿಯಮ್ ಅವರು 'ನಾಗ ದೀಕ್ಷೆ' ತೆಗೆದುಕೊಂಡು ಶಿವಾನಿ ಭಾರತಿ ಎಂದು ಮರುನಾಮಕರಣಗೊಂಡಿದ್ದಾರೆ. ಫ್ರಾನ್ಸ್‌ನ ಬಿಕ್ವೆನ್ ಮೇರಿ ಅವರು ದೀಕ್ಷೆಯ ನಂತರ, ಈಗ ಕಾಮಾಖ್ಯ ಗಿರಿ ಎಂದು ಹೆಸರು ಪಡೆದಿದ್ದಾರೆ. ಹಾಗೆಯೇ, ನೇಪಾಳದ ಮೋಕ್ಷಿತಾ ರೈ ಕೂಡ ಅಖಾಡಾದಲ್ಲಿ 'ನಾಗ ದೀಕ್ಷೆ' ಸ್ವೀಕರಿಸಿ ಮೋಕ್ಷಿತ ಗಿರಿ ಎಂದು ಮರು ನಾಮಂಕಿತರಾಗಿದ್ದಾರೆ.