ನವದೆಹಲಿ:ಭಾರತದ ಮೊದಲ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆ (ಎಚ್ಇಎಂಎಸ್) (Emergency Medical Service-HEMS) ಉತ್ತರಾಖಂಡದಿಂದ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗುರುವಾರ ಹೇಳಿದ್ದಾರೆ. "ದೇಶದ ಮೊದಲ ಎಚ್ಇಎಂಎಸ್ ಸೇವೆಯನ್ನು ರಾಜ್ಯದಿಂದ ಪ್ರಾರಂಭಿಸಲಾಗುವುದು ಎಂದು ನಾನು ಉತ್ತರಾಖಂಡದ ಜನರಿಗೆ ತಿಳಿಸಲು ಬಯಸುತ್ತೇನೆ" ಎಂದು ಸಿಂಧಿಯಾ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಲ್ಲಿ ಹೆಲಿಕಾಪ್ಟರ್ ಅನ್ನು ನಿಲ್ಲಿಸಲಾಗುವುದು. ಅಪಘಾತಕ್ಕೀಡಾದ ಯಾರನ್ನಾದರೂ ಅಲ್ಲಿಂದ ವೈದ್ಯಕೀಯ ಚಿಕಿತ್ಸೆಗಾಗಿ ಏರ್ಲಿಫ್ಟ್ ಮಾಡಿ 150 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಕಳುಹಿಸಲು ಸಾಧ್ಯವಾಗಲಿದೆ. ಎಚ್ಇಎಂಎಸ್ ಮೂಲಕ ಹೆಲಿಕಾಪ್ಟರ್ಗಳನ್ನು ಬಳಸಿಕೊಂಡು ದೇಶಾದ್ಯಂತದ ವ್ಯಾಪಕ ಜನಸಂಖ್ಯೆಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆಘಾತ ಆರೈಕೆ ಸೇವೆಗಳ ಸೌಲಭ್ಯವನ್ನು ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಹೊಸ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸೇವೆಗಳು (ಎಚ್ಇಎಂಎಸ್) 'ಸಂಜೀವಿನಿ' ಯೋಜನೆಯಡಿ 150 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿವೆ.
ಉತ್ತರಾಖಂಡ ವಿಮಾನ ನಿಲ್ದಾಣದಲ್ಲಿ ಹೊಸ ಸಮಗ್ರ ವಿಮಾನ ನಿಲ್ದಾಣ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರಿಗೆ ಭರವಸೆ ನೀಡಿದ್ದಾರೆ. "ಏಮ್ಸ್ ರಿಷಿಕೇಷ್ನಿಂದ ಎಚ್ಇಎಂಎಸ್ಗಾಗಿ ಯೋಜನೆಗಾಗಿ ಸಿದ್ಧತೆ ನಡೆಯುತ್ತಿದೆ. ನನ್ನ ಮೇಲ್ವಿಚಾರಣೆಯಲ್ಲಿ ಹೆಲಿಕಾಪ್ಟರ್ ಜೋಡಣೆ ಮತ್ತು ಪ್ರಮಾಣೀಕರಣ ಪ್ರಗತಿಯಲ್ಲಿದೆ" ಎಂದು ಸಿಂಧಿಯಾ ದೃಢಪಡಿಸಿದರು.