ಹೈದರಾಬಾದ್:ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವ ಪ್ರತೀಕಾರ ಮಾಡಿರುವ ಇಸ್ರೇಲ್ ನಾಡಿಗೆ ಉದ್ಯೋಗ ಅರಸಿ ಭಾರತದ ಸಾವಿರಾರು ಕಾರ್ಮಿಕರು ಪ್ರಯಾಣಿಸಲು ಅಣಿಯಾಗಿದ್ದಾರೆ. ಇದಕ್ಕಾಗಿ ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಸ್ರೇಲ್ ಸದ್ಯಕ್ಕೆ ಕಾರ್ಮಿಕರ ಬಿಕ್ಕಟ್ಟು ಎದುರಿಸುತ್ತಿದೆ. ಯುದ್ದದ ಹಿನ್ನೆಲೆಯಲ್ಲಿ ಇಸ್ರೇಲ್ ಗಡಿ ದಾಟಿ ಪ್ಯಾಲೇಸ್ತೀನಿಯರು ಕೆಲಸಕ್ಕೆ ಬಾರದಂತೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಕಾರ್ಮಿಕರು ಸಿಗುತ್ತಿಲ್ಲ. ಇದೀಗ ಇಸ್ರೇಲ್ ಅಧಿಕಾರಿಗಳು ಭಾರತದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ.
ಭಾರತದಲ್ಲಿ ಕಟ್ಟಡ ಕಾರ್ಮಿಕರು, ಗಾರೆ ಕೆಲಸದವರು, ಮರಗೆಲಸ, ಪ್ಲಂಬಿಂಗ್ನಂತಹ ಕೌಶಲ್ಯ ಹೊಂದಿರುವವರ ನೇಮಕಕ್ಕೆ ಇಸ್ರೇಲ್ ಮುಂದಾಗಿದೆ. ಇದಕ್ಕಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ವಿಶೇಷ ನೇಮಕಾತಿ ಕೇಂದ್ರಗಳನ್ನು ತೆರೆಯಲಾಗಿದೆ. ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಂಜಾಬ್ನ ಜನರು ನೋಂದಣಿ ಕೇಂದ್ರಗಳಿಗೆ ಬರುತ್ತಿದ್ದಾರೆ.
ಉದ್ಯೋಗಕ್ಕಾಗಿ ಸರತಿ ಸಾಲು: ವಿವಿಧ ಉದ್ಯೋಗಗಳಿಗಾಗಿ ಸದ್ಯ 3,080 ಮಂದಿ ಇಸ್ರೇಲ್‌ಗೆ ತೆರಳಲು ಆಯ್ಕೆಯಾಗಿದ್ದಾರೆ. ಲಕ್ನೋದ ಸರ್ಕಾರಿ ಐಟಿಐಯಲ್ಲಿ ಇಸ್ರೇಲ್‌ಗೆ ಕಳುಹಿಸುವ ಕಾರ್ಮಿಕರ ನೋಂದಣಿ ಕಾರ್ಯ ಮುಗಿದಿದ್ದು, ಜನವರಿ 30ರಂದು ಕೌಶಲ್ಯ ಪರೀಕ್ಷೆ ನಡೆಯಲಿದೆ.
ಈ ಕುರಿತು ಮಾತನಾಡಿರುವ ಲಕ್ನೋ ಐಟಿಐ ಪ್ರಿನ್ಸಿಪಲ್ ರಾಜ್ ಕುಮಾರ್ ಯಾದವ್, "ಇಸ್ರೇಲ್ನಲ್ಲಿ 10 ಸಾವಿರ ಕಟ್ಟಡ ಕಾರ್ಮಿಕ ಹುದ್ದೆಗಳಿವೆ. ಇದಕ್ಕಾಗಿ ಸಾವಿರಾರು ಮಂದಿ ಐಟಿಐ ಕಚೇರಿ ಎದುರು ನೋಂದಣಿಗೆ ನಿಂತಿದ್ದಾರೆ. ಕಾರ್ಮಿಕ ಇಲಾಖೆಯಿಂದ ನೋಂದಣಿಗೊಂಡ ಮತ್ತು ಸಂಸ್ಥೆ ಸಹಿ ಮಾಡಿದ ಅರ್ಜಿಗಳನ್ನು ಆರಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 30ರಂದ ಕೌಶಲ್ಯ ಪರೀಕ್ಷೆ ನಡೆಯಲಿದೆ" ಎಂದರು.