ಕರ್ನಾಟಕ

karnataka

ETV Bharat / bharat

ಭಾರತೀಯ ಸೇನೆ ಆರ್ಡಿನೆನ್ಸ್ ಕಾರ್ಪ್ಸ್ ಸಂಸ್ಥಾಪನಾ 2024: "ಶಸ್ತ್ರ ಸೇ ಶಕ್ತಿ" - Army Ordnance Corps Raising Day - ARMY ORDNANCE CORPS RAISING DAY

ಭಾರತೀಯ ಸೇನೆಯಲ್ಲಿ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಸೇನಾಬಲದ ಬಗ್ಗೆ ಫ್ರೆಂಚ್​ ದೊರೆ ನೆಪೋಲಿಯನ್​ ಹೊಂದಿದ್ದ ನಂಬಿಕೆಯನ್ನು ಉದಾಹರಿಸುವಂತಿರುವ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್​​ನ ಇತಿಹಾಸ, ಸಾಧನೆಯ ಕುರಿತಾದ ಕೆಲ ಮಾಹಿತಿ ಇಲ್ಲಿದೆ.

Indian Army Ordnance Corps Raising Day 2024
ಇಂಡಿಯನ್ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಸಂಸ್ಥಾಪನಾ ದಿನ 2024

By ETV Bharat Karnataka Team

Published : Apr 8, 2024, 10:49 AM IST

ಭಾರತೀಯ ಸೇನೆಗೆ ಸಾಮಗ್ರಿ ಮತ್ತು ವ್ಯವಸ್ಥಾಪನಾ ಬೆಂಬಲ ಒದಗಿಸುವ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ (AOC) ಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಇಂದು (ಏಪ್ರಿಲ್ 8) 'ಭಾರತೀಯ ಸೇನೆಯ ಆರ್ಡಿನೆನ್ಸ್ ಕಾರ್ಪ್ಸ್ ಸಂಸ್ಥಾಪನಾ ದಿನ'ವನ್ನು ಆಚರಿಸಲಾಗುತ್ತದೆ. 15ನೇ ಶತಮಾನದ ಹಿಂದಿನ ಪರಂಪರೆಯೊಂದಿಗೆ, "ಶಸ್ತ್ರ ಸೇ ಶಕ್ತಿ" (ಶಸ್ತ್ರಾಸ್ತ್ರಗಳ ಮೂಲಕ ಶಕ್ತಿ) ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸೇನಾಪಡೆಗಳ ಬೆಳವಣಿಗೆಗೆ ಅಗತ್ಯ ಪೂರೈಕೆ ಮಾಡುವಲ್ಲಿ ಕಾರ್ಪ್ಸ್ ಪ್ರಮುಖ ಕಾರ್ಯ ನಿರ್ವಹಿಸುತ್ತಿದೆ.

ಆರ್ಡಿನೆನ್ಸ್ ಕಾರ್ಪ್ಸ್ ಬಗ್ಗೆ ವಿವರ: ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಭಾರತೀಯ ಸೇನೆಗೆ ಪ್ರಮುಖ ಜೀವಸೆಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಂಧನ, ಆಹಾರ ಮತ್ತು ಔಷಧಿಗಳನ್ನು ಹೊರತುಪಡಿಸಿ, ಬಟ್ಟೆಯಿಂದ ಶಸ್ತ್ರಾಸ್ತ್ರಗಳವರೆಗೆ ಎಲ್ಲವನ್ನೂ ಪೂರೈಸುವ ಜವಾಬ್ದಾರಿ ಇದರದ್ದಾಗಿದೆ. ಯುದ್ಧ ಸಾಮಗ್ರಿಗಳ ನಿರ್ವಹಣೆ, ದುರಸ್ತಿ ಮತ್ತು ವಿಲೇವಾರಿ ಮಾಡುವ ಜೊತೆಗೆ ಸುಧಾರಿತ ಸ್ಫೋಟಕ ಸಾಧನಗಳ (IED) ನಿರ್ವಹಣೆಗೆ ವಿಶೇಷ ತರಬೇತಿ ನೀಡುತ್ತದೆ. ಸೇನೆಯ ಬಲವು ಅದರ ಸೈನಿಕರಲ್ಲಿ ಮಾತ್ರವಲ್ಲದೆ, ಅದರ ಶಸ್ತ್ರಾಗಾರದಲ್ಲಿಯೂ ಅಡಗಿರುತ್ತದೆ ಎಂಬ ನೆಪೋಲಿಯನ್​​ನ ನಂಬಿಕೆಗೆ ಕಾರ್ಪ್ಸ್ ಸಾಕ್ಷಿಯಾಗಿದೆ.

ಐತಿಹಾಸಿಕ ಬೆಳವಣಿಗೆ: ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಬೇರುಗಳು 15ನೇ ಶತಮಾನದಲ್ಲಿನ ಈಸ್ಟ್ ಇಂಡಿಯಾ ಕಂಪನಿ ಸಂದರ್ಭದಿಂದಲೇ ಆರಂಭಗೊಂಡಿದ್ದವು. ಏಪ್ರಿಲ್ 8, 1775 ರಂದು 'ಬೋರ್ಡ್ ಆಫ್ ಆರ್ಡಿನೆನ್ಸ್' ಎಂಬುದಾಗಿ ಸ್ಥಾಪನೆಗೊಂಡು ಔಪಚಾರಿಕ ಮನ್ನಣೆ ಲಭಿಸಿತ್ತು. 1896ರ ವೇಳೆಗೆ ಆರ್ಮಿ ಆರ್ಡಿನೆನ್ಸ್ ಡಿಪಾರ್ಟ್ಮೆಂಟ್ ಮತ್ತು ಕಾರ್ಪ್ಸ್ ಆಗಿ ಮಾರ್ಪಟ್ಟಿತು. 'ರಾಯಲ್' ಎಂಬುದಾಗಿ ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿಯೇ ಅಂದರೆ 1918ರಲ್ಲಿ ಬಳಕೆ ಬಂತು. ನಂತರ 1922 ರಲ್ಲಿ 'ಇಂಡಿಯನ್ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್' ಕರೆಯಲಾಗಿದ್ದು, ಬಳಿಕ 1950ರಲ್ಲಿ ಇದನ್ನು 'ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್' ಎಂದು ಸರಳೀಕರಣ ಮಾಡಲಾಯಿತು.

ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಕೊಡುಗೆಗಳು:ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಲಾಜಿಸ್ಟಿಕಲ್ ನೆರವಿನ ಜೊತೆಗೆ ಯುದ್ಧದ ಪ್ರಾವೀಣ್ಯತೆ ಮತ್ತು ನಾವೀನ್ಯತೆಯನ್ನೂ ಒಳಗೊಂಡಿದೆ. ವಿಶ್ವ ಯುದ್ಧದ ವೇಳೆ ನಡೆದ ಕಾಂಗ್ಲಾ-ಟಾಂಗ್ಬಿ ಕದನ ಇದಕ್ಕೆ ಉದಾಹರಣೆಯಾಗಿದೆ. ಈ ಕಾದಾಟದಲ್ಲಿ ಜಪಾನಿನ ಪಡೆಗಳ ವಿರುದ್ಧ ಇದರ ಶಸ್ತ್ರಾಸ್ತ್ರ ಸಿಬ್ಬಂದಿಯು ಗಮನಾರ್ಹ ಧೈರ್ಯ ಮತ್ತು ಹೋರಾಟ ತೋರಿದ್ದರು. ವೀರ ಸೇನಾನಿಗಳ ಕಾರ್ಯತಂತ್ರದ ಹೋರಾಟ ಮಾತ್ರವಲ್ಲದೆ, ನಿರ್ಣಾಯಕ ಪೂರೈಕೆಗಳನ್ನು ಮಾಡುವ ಮೂಲಕ ವ್ಯವಸ್ಥಾಪಕ ಮತ್ತು ಸೈನಿಕನಾಗಿ ಕಾರ್ಪ್ಸ್​​ ತನ್ನ ದ್ವಿಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿತ್ತು.

ತರಬೇತಿ ಮತ್ತು ಅಭಿವೃದ್ಧಿ: ತೆಲಂಗಾಣದ ಸಿಕಂದರಾಬಾದ್‌ನಲ್ಲಿ ಪ್ರಧಾನ ಕಚೇರಿ ಇದ್ದು, ಆರ್ಡಿನೆನ್ಸ್ ಸಿಬ್ಬಂದಿಗೆ ತರಬೇತಿಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ, ಅಭ್ಯರ್ಥಿಗಳಿಗೆ ಮಿಲಿಟರಿ ತರಬೇತಿಯ ಜೊತೆಗೆ ರಿಪೇರಿ ಕಾರ್ಯ ಮತ್ತು ಪೂರಕ ವಹಿವಾಟಿನ ಬಗ್ಗೆಯೂ ವಿಶೇಷ ಸೂಚನೆಗಳನ್ನು ನೀಡಲಾಗುತ್ತದೆ. ಕೌಶಲ್ಯ ವೃದ್ಧಿಗೆ ಒತ್ತು ನೀಡುವುದರಿಂದ ಕಾರ್ಪ್ಸ್ ಸದಸ್ಯರು ದಿನನಿತ್ಯದ ನಿರ್ವಹಣೆಯ ಜೊತೆಗೆ ತುರ್ತು ಪರಿಸ್ಥಿತಿಗಳವರೆಗಿನ ವಿಭಿನ್ನ ಸವಾಲುಗಳನ್ನೂ ಸಹ ನಿಭಾಯಿಸಲು ಸಜ್ಜಾಗಿರುತ್ತಾರೆ.

ಆಧುನೀಕರಣ ಅಳವಡಿಕೆ:ಯುದ್ಧವು ಮುಂದುವರೆದಂತೆ, ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಕೂಡ ವಿಕಸನಗೊಳ್ಳುತ್ತಿದೆ. ಕಾರ್ಪ್ಸ್​​ನಲ್ಲಿ ಹಲವು ಹಂತಗಳಲ್ಲಿ ಪರಿವರ್ತನೆಗಳಾಗಿದೆ. ದಾಸ್ತಾನುಗಳ ದಕ್ಷತೆ ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಮತ್ತು ಆಧುನಿಕ ದಾಸ್ತಾನು ನಿರ್ವಹಣಾ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದ ಸೇನೆಗೆ ತಡೆರಹಿತ ಲಾಜಿಸ್ಟಿಕ್ಸ್ ಬೆಂಬಲ ಖಾತ್ರಿಯಾಗುವುದಲ್ಲದೆ, ಸಕಾಲಿಕ ಸಂಗ್ರಹಣೆ ಮತ್ತು ಅಗತ್ಯ ಸರಬರಾಜುಗಳ ವಿತರಣೆಯು ಸುಗಮವಾಗುತ್ತಿದೆ.

ಆರ್ಡಿನೆನ್ಸ್ ಸಿಬ್ಬಂದಿಯಿಂದ ಕಾಂಗ್ಲಾ-ಟೋಂಗ್ಬಿ ಕದನ: ಏಪ್ರಿಲ್ 6-7, 1944ರ ರಾತ್ರಿ, 221 ಅಡ್ವಾನ್ಸ್ ಆರ್ಡಿನೆನ್ಸ್ ಡಿಪೋ (AOD) ದ ಆರ್ಡನೆನ್ಸ್ ಪಡೆಗಳು ಎರಡನೇ ವಿಶ್ವ ಸಮರದ ರಕ್ತಸಿಕ್ತ ಹೋರಾಟಗಳಲ್ಲೊಂದಾದ ಕಾಂಗ್ಲಾ-ಟೋಂಗ್ಬಿ ಕದನದಲ್ಲಿ ಪಾಲ್ಗೊಂಡಿದ್ದವು.

ಇಂಫಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಹಿಡಿತ ಸಾಧಿಸಲು, ಜಪಾನಿನ ಪಡೆಗಳು ತ್ರಿಕೋನ ದಾಳಿಗೆ ಸಿದ್ಧತೆ ನಡೆಸಿದ್ದವು. 33ನೇ ಜಪಾನಿ ವಿಭಾಗವು ಭಾರತದ 17ನೇ ವಿಭಾಗವನ್ನು ಹಿಂಬಾಲಿಸಿ ಟಿಡ್ಡಿಮ್ (ಮ್ಯಾನ್ಮಾರ್) ನಲ್ಲಿ ಇಂಫಾಲ್ ತಲುಪಲು ಕೊಹಿಮಾ - ಮಣಿಪುರ ಹೆದ್ದಾರಿಯಲ್ಲಿ ಪ್ರಬಲ ಪೈಪೋಟಿ ನೀಡಿತು. ಇದು ಮುಂದೆ ಕಾಂಗ್ಲಾ-ತೋಂಗ್ಬಿ ಕದನಕ್ಕೆ ನಾಂದಿಯಾಯಿತು. 221 ಅಡ್ವಾನ್ಸ್ ಆರ್ಡಿನೆನ್ಸ್ ಡಿಪೋ ಪಡೆಗಳು ಕಡಿಮೆ ಪ್ರಮಾಣದಲ್ಲಿದ್ದರೂ ದೃಢವಾಗಿ ಕಾಂಗ್ಲಾ-ಟೋಂಗ್ಬಿಯಲ್ಲಿ ಆಕ್ರಮಣಕಾರಿ ಜಪಾನಿ ಪಡೆಗಳ ವಿರುದ್ಧ ಪ್ರಬಲ ಹೋರಾಟ ನಡೆಸಿದವು.

ಜಪಾನಿಯರು ಏಪ್ರಿಲ್ 6-7, 1944ರ ಸಂಜೆ ಡಿಪೋ ಮೇಲೆ ಬೃಹತ್ ದಾಳಿ ಕೈಗೊಂಡರು. ಈ ಸಂದರ್ಭದಲ್ಲಿ ಹೈಡನ್​ ಬಂಕರ್​ಗಳನ್ನೂ ಬಳಸಲಾಯಿತು. ಸಮೀಪದ ಶತ್ರು ವಿಭಾಗವನ್ನು ಪತ್ತೆಹಚ್ಚಿದ ಬಳಿಕ ಈ ಬಂಕರ್‌ನೊಳಗಿನ ಬ್ರೆನ್ ಗನ್ ವಿಭಾಗವು ಗುಂಡಿನ ದಾಳಿ ಪ್ರಾರಂಭಿಸಿತು. ಪರಿಣಾಮ ಜಪಾನಿಯರು ಹಿಮ್ಮೆಟ್ಟುವಂತಾಯಿತಲ್ಲದೆ, ಅನೇಕರು ಪ್ರಾಣ ಕಳೆದುಕೊಂಡರು. ಇದು ಎದುರಾಳಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿತು. ಹವಾಲ್ದಾರ್ ಅಂಗಡಿ ಬಸಂತ್ ಸಿಂಗ್ ಅವರು ಬ್ರೆನ್ ಗನ್ ನಿರ್ವಹಣಾ ಜವಾಬ್ದಾರಿ ಹೊತ್ತಿದ್ದರು.

ಭಾರತೀಯ ಸೇನೆಯ ಆರ್ಡಿನೆನ್ಸ್ ಕಾರ್ಪ್ಸ್ ತನ್ನ ರೈಸಿಂಗ್ ಡೇ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅದರ ಶ್ರೀಮಂತ ಇತಿಹಾಸ ಮಾತ್ರವಲ್ಲದೆ, ಅದರಲ್ಲಿನ ವಿಕಸನ ಮತ್ತು ಕರ್ತವ್ಯದ ಸಮರ್ಪಣೆಯನ್ನೂ ನೆನೆಯಬೇಕಾಗಿದೆ. ಶತಮಾನಗಳ ಹಿಂದಿನ ಆರಂಭದಿಂದ ಆಧುನಿಕ ಮತ್ತು ಎಲ್ಲದಕ್ಕೂ ಹೊಂದಿಕೊಳ್ಳಬಲ್ಲ ಶಕ್ತಿಯಾಗಿ ಇಂದಿನ ಪಾತ್ರದವರೆಗೆ, ರಾಷ್ಟ್ರದ ರಕ್ಷಕರಿಗೆ ಅಚಲ ಬೆಂಬಲ ನೀಡುವತ್ತ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ದೃಢವಾಗಿ ನಿಂತಿದೆ.

ನಾಳಿನ ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿರುವ ಆರ್ಡಿನೆನ್ಸ್ ಕಾರ್ಪ್ಸ್, "ಶಸ್ತ್ರ ಸೇ ಶಕ್ತಿ" ಎಂಬ ಚೈತನ್ಯದೊಂದಿಗೆ ಈ ಹಿಂದಿನ ಅದ್ಭುತ ಶಕ್ತಿಯ ಜೊತೆಗೆ ಭವಿಷ್ಯದ ಭರವಸೆಯೊಂದಿಗೆ ಮುನ್ನಡೆಯುತ್ತಿದೆ.

ಇದನ್ನೂ ಓದಿ:ವಿಶೇಷ ರಕ್ಷಣಾ ಗುಂಪು ರೈಸಿಂಗ್ ದಿನ 2024: ಎಸ್​ಪಿಜಿಗೆ 39ನೇ ವಾರ್ಷಿಕೋತ್ಸವ - SPECIAL PROTECTION GROUP

ABOUT THE AUTHOR

...view details