ಪ್ರತೀ ವರ್ಷ ಅಕ್ಟೋಬರ್ 27 ಅನ್ನು ಕಾಲಾಳು ಪಡೆ ಅಥವಾ ಪದಾತಿ ದಳ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ದೇಶಕ್ಕಾಗಿ ಸಮರ್ಪಿಸಿದ ಭಾರತೀಯ ಸೇನೆಯ ಹೋರಾಟವನ್ನು ಗುರುತಿಸಿ, ಗೌರವಿಸಲಾಗುತ್ತದೆ. ಈ ವರ್ಷ 78ನೇ ಪದಾತಿ ದಳ ದಿನವನ್ನು ಆಚರಿಸಲಾಗುತ್ತಿದೆ.
ಮಹತ್ವ:ಭಾರತೀಯ ಸೇನೆಯ ಸಿಖ್ ರೆಜಿಮೆಂಟ್‌ನ ಮೊದಲ ಬೆಟಾಲಿಯನ್ ಪಾಕಿಸ್ತಾನದ ಸೇನೆ ಮತ್ತು ಲಷ್ಕರ್ ಉಗ್ರರನ್ನು ಹಿಮ್ಮೆಟ್ಟಿಸಿದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.
ಇತಿಹಾಸ:1947ರಅಕ್ಟೋಬರ್ 22ರಂದು ಪಾಕ್ ಸೈನಿಕರು ಜಮ್ಮು ಕಾಶ್ಮೀರವನ್ನು ಪ್ರವೇಶಿಸಿದ್ದರು. ಕಣಿವೆ ನಾಡನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದು ಮತ್ತು ಅದನ್ನು ಪಾಕ್‌ನೊಂದಿಗೆ ವಿಲೀನಗೊಳಿಸುವುದು ಅವರ ದುರುದ್ದೇಶವಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಶ್ರೀನಗರದ ಮಹಾರಾಜ ಹರಿಸಿಂಗ್ ಅಕ್ಟೋಬರ್ 26ರಂದು ಭಾರತ ಸೇರುವ ಒಪ್ಪಂದಕ್ಕೆ ಸಹಿ ಹಾಕಿದರು. ನಂತರ ಜಮ್ಮು ಕಾಶ್ಮೀರ ಭಾರತದ ಭಾಗವಾಯಿತು. ಈ ಒಪ್ಪಂದದೊಂದಿಗೆ ಅವರು ದೇಶವನ್ನು ಅಕ್ರಮವಾಗಿ ಪ್ರವೇಶಿಸಿದ ಪಾಕ್ ಆಕ್ರಮಣಕಾರರ ವಿರುದ್ಧ ಹೋರಾಡಲು ಭಾರತೀಯ ಸೇನೆ ಮತ್ತು ಅದರ ಪಡೆಗಳನ್ನು ಬೆಂಬಲಿಸಿದರು.