ಕರ್ನಾಟಕ

karnataka

ETV Bharat / bharat

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ: 96ನೇ ಸ್ಥಾನಕ್ಕೆ ಕುಸಿದ ಭಾರತ, ಡೆನ್ಮಾರ್ಕ್ ಅತಿ ಕಡಿಮೆ ಭ್ರಷ್ಟ ರಾಷ್ಟ್ರ - CORRUPTION PERCEPTION INDEX

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ ಕುಸಿದಿದೆ.

ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ: 96ನೇ ಸ್ಥಾನಕ್ಕೆ ಕುಸಿದ ಭಾರತ, ಡೆನ್ಮಾರ್ಕ್ ಅತಿ ಕಡಿಮೆ ಭ್ರಷ್ಟ ರಾಷ್ಟ್ರ
ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (Transparency International)

By ETV Bharat Karnataka Team

Published : Feb 12, 2025, 5:59 PM IST

ನವದೆಹಲಿ:2024ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ (ಸಿಪಿಐ) ಭಾರತವು 100ರಲ್ಲಿ 38 ಅಂಕಗಳನ್ನು ಗಳಿಸುವ ಮೂಲಕ 96ನೇ ಸ್ಥಾನಕ್ಕೆ ಕುಸಿದಿದೆ. ಸೂಚ್ಯಂಕದಲ್ಲಿ 180 ದೇಶಗಳನ್ನು ಪಟ್ಟಿ ಮಾಡಲಾಗಿದ್ದು, ಡೆನ್ಮಾರ್ಕ್ ಅತಿ ಕಡಿಮೆ ಭ್ರಷ್ಟ ರಾಷ್ಟ್ರವಾಗಿದ್ದರೆ, ದಕ್ಷಿಣ ಸುಡಾನ್ ಅತ್ಯಧಿಕ ಭ್ರಷ್ಟ ರಾಷ್ಟ್ರವಾಗಿದೆ.

ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ: 2024ರಲ್ಲಿ ಭಾರತದ ಒಟ್ಟಾರೆ ಸ್ಕೋರ್ 38 ಆಗಿದ್ದರೆ, 2023ರಲ್ಲಿ 39 ಮತ್ತು 2022ರಲ್ಲಿ 40 ಆಗಿತ್ತು. 2023ರಲ್ಲಿ ಭಾರತ 93ನೇ ಸ್ಥಾನದಲ್ಲಿತ್ತು. ವಿಶ್ವದ ಅತ್ಯಂತ ವ್ಯಾಪಕವಾಗಿ ಪರಿಗಣಿಸಲ್ಪಡುವ ಜಾಗತಿಕ ಭ್ರಷ್ಟಾಚಾರ ಶ್ರೇಯಾಂಕದ ಈ ವರದಿಯನ್ನು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಹೆಸರಿನ ಸರ್ಕಾರೇತರ ಸಂಸ್ಥೆ ತಯಾರಿಸಿದೆ. ಈ ಸಂಸ್ಥೆಯು ತನ್ನನ್ನು ತಾನು 'ಭ್ರಷ್ಟಾಚಾರದ ವಿರುದ್ಧದ ಜಾಗತಿಕ ಒಕ್ಕೂಟ' ಎಂದು ಕರೆದುಕೊಳ್ಳುತ್ತದೆ.

ಭ್ರಷ್ಟಾಚಾರದ ಮಟ್ಟ ಅಳೆಯುವಿಕೆ ಹೇಗೆ?: ತಜ್ಞರು ಮತ್ತು ಉದ್ಯಮಿಗಳು ನೀಡಿದ ಮಾಹಿತಿಗಳ ಆಧಾರದ ಮೇಲೆ ದೇಶದ ಸಾರ್ವಜನಿಕ ವಲಯದಲ್ಲಿನ ಭ್ರಷ್ಟಾಚಾರದ ಮಟ್ಟವನ್ನು ಅಳೆಯಲಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಸೂಚ್ಯಂಕವು 180 ದೇಶ ಮತ್ತು ಪ್ರದೇಶಗಳನ್ನು ಒಳಗೊಂಡಿದ್ದು, ಶೂನ್ಯದಿಂದ 100ರವರೆಗೆ ಶ್ರೇಯಾಂಕ ನೀಡಲಾಗುತ್ತದೆ. 'ಶೂನ್ಯ' ಅತಿ ಭ್ರಷ್ಟ ಎಂದಾದರೆ, '100' ಅತಿ ಕಡಿಮೆ ಭ್ರಷ್ಟ ಎಂದರ್ಥ.

2024ರ ಸಿಪಿಐ ಜಾಗತಿಕವಾಗಿ ಭ್ರಷ್ಟಾಚಾರದ ಘೋರ ಚಿತ್ರಣವನ್ನು ಪ್ರಸ್ತುತಪಡಿಸಿದೆ. ಸಮೀಕ್ಷೆಗೆ ಒಳಪಡಿಸಲಾದ 180 ದೇಶಗಳ ಪೈಕಿ ಮೂರನೇ ಎರಡರಷ್ಟು ದೇಶಗಳು 100ರಲ್ಲಿ 50ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿವೆ. 2012ರಿಂದ, ಕೇವಲ 32 ದೇಶಗಳು ಪ್ರಗತಿ ಸಾಧಿಸಿದ್ದರೆ, 47 ದೇಶಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಹಾಗೂ 101 ದೇಶಗಳು ಯಾವುದೇ ಪ್ರಗತಿ ಸಾಧಿಸಿಲ್ಲ.

ಜಾಗತಿಕ ಹವಾಮಾನ ಸುಧಾರಣೆಯ ಯೋಜನೆಗಳಿಗೆ ಭ್ರಷ್ಟಾಚಾರವು ಪ್ರಮುಖ ಅಡ್ಡಿಯಾಗಿದೆ ಎಂದು ಸಂಶೋಧನೆ ಹೇಳಿದೆ. ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವ ಮತ್ತು ಈ ಮೂಲಕ ಜಾಗತಿಕ ತಾಪಮಾನ ಏರಿಕೆಯನ್ನು ನಿಲ್ಲಿಸುವ ಪ್ರಯತ್ನಗಳಿಗೆ ಭ್ರಷ್ಟಾಚಾರ ಅಡ್ಡಿಯುಂಟು ಮಾಡುತ್ತದೆ.

ಅತಿ ಕಡಿಮೆ ಭ್ರಷ್ಟಾಚಾರವಿರುವ ಅಗ್ರ 3 ದೇಶಗಳಿವು: ಸಿಪಿಐ ಸೂಚ್ಯಂಕದಲ್ಲಿ ಡೆನ್ಮಾರ್ಕ್ 90 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಫಿನ್‌ಲ್ಯಾಂಡ್ 88 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಮತ್ತು ಸಿಂಗಾಪುರ್ 84 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಾಂಪ್ರದಾಯಿಕವಾಗಿ ಅತ್ಯುತ್ತಮ ದೇಶಗಳಲ್ಲಿ ಒಂದಾದ ನ್ಯೂಜಿಲೆಂಡ್ 2012ರ ನಂತರ ಮೊದಲ ಬಾರಿಗೆ 83 ಅಂಕಗಳೊಂದಿಗೆ ಅಗ್ರ ಮೂರು ಸ್ಥಾನಗಳಿಂದ ಹೊರಗುಳಿದಿದೆ. ಲಕ್ಸೆಂಬರ್ಗ್, ನಾರ್ವೆ ಮತ್ತು ಸ್ವಿಟ್ಜರ್‌ಲೆಂಡ್ 81 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸ್ವೀಡನ್ 80 ಮತ್ತು ನೆದರ್‌ಲ್ಯಾಂಡ್ಸ್ 78 ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಆಸ್ಟ್ರೇಲಿಯಾ, ಐಸ್‌ಲ್ಯಾಂಡ್ ಮತ್ತು ಐರ್ಲೆಂಡ್ 77 ಅಂಕಗಳೊಂದಿಗೆ ಸಮಬಲ ಸಾಧಿಸಿವೆ.

ಭಾರತ ಉಪಖಂಡದಲ್ಲಿ ಭೂತಾನ್‌ನಲ್ಲಿ ಕಡಿಮೆ ಭ್ರಷ್ಟಾಚಾರ: ಭಾರತ 38 ಅಂಕಗಳೊಂದಿಗೆ 96ನೇ ಸ್ಥಾನದಲ್ಲಿದ್ದು, ಕಳೆದ ವರ್ಷಕ್ಕಿಂತ ಒಂದು ಅಂಕ ಕಳೆದುಕೊಂಡಿದೆ. ಭಾರತವು ತನ್ನ ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳಿಗಿಂತ ಉತ್ತಮ ಸ್ಥಿತಿಯಲ್ಲಿದ್ದರೂ ಈಗಲೂ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಹೊಂದಿದೆ. ಈ ವಲಯದಲ್ಲಿ ಭೂತಾನ್ 72 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚೀನಾ 43 ಅಂಕಗಳೊಂದಿಗೆ ಭಾರತಕ್ಕಿಂತ ಒಂದು ಅಂಕ ಮುಂದಿದೆ. ಬಾಂಗ್ಲಾದೇಶ (23), ಪಾಕಿಸ್ತಾನ (27), ನೇಪಾಳ (34) ಮತ್ತು ಶ್ರೀಲಂಕಾ (32) ಭಾರತಕ್ಕಿಂತ ಕೆಳಗಿವೆ.

ಬಲವಾದ, ಸ್ವತಂತ್ರ ಸಂಸ್ಥೆಗಳನ್ನು ಹೊಂದಿರುವ, ಮುಕ್ತ, ನ್ಯಾಯಸಮ್ಮತ ಚುನಾವಣೆಗಳು ನಡೆಯುವ ಮತ್ತು ದಮನಕಾರಿ ಸರ್ವಾಧಿಕಾರಿ ಆಡಳಿತಗಳನ್ನು ಹೊಂದಿರುವ ದೇಶಗಳ ನಡುವೆ ಭ್ರಷ್ಟಾಚಾರದ ಪ್ರಮಾಣದಲ್ಲಿ ವ್ಯಾಪಕ ವ್ಯತ್ಯಾಸವಿರುವುದನ್ನು ಸೂಚ್ಯಂಕವು ಸೂಚಿಸುತ್ತದೆ. ಪೂರ್ಣ ಪ್ರಜಾಪ್ರಭುತ್ವ ದೇಶಗಳುಸರಾಸರಿ 73, ದೋಷಪೂರಿತ ಪ್ರಜಾಪ್ರಭುತ್ವಗಳು ಸರಾಸರಿ 47 ಮತ್ತು ಪ್ರಜಾಪ್ರಭುತ್ವೇತರ ಆಡಳಿತಗಳು ಕೇವಲ 33 ಅಂಕಗಳನ್ನು ಗಳಿಸಿವೆ.

ಅಮೆರಿಕ, ರಷ್ಯಾ, ಫ್ರಾನ್ಸ್‌ ರೇಟಿಂಗ್‌ ಕುಸಿತ: ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್ ಮತ್ತು ರಷ್ಯಾದಂತಹ ಪ್ರಮುಖ ಶಕ್ತಿಗಳು ಸೇರಿದಂತೆ ಹಲವಾರು ದೇಶಗಳು ಒಂದು ದಶಕದಲ್ಲಿಯೇ ಅತ್ಯಂತ ಕೆಟ್ಟ ರೇಟಿಂಗ್ ಪಡೆದಿವೆ. ಅಮೆರಿಕ 69 ಅಂಕಗಳಿಂದ 65ನೇ ಅಂಕಗಳಿಗೆ ಕುಸಿದಿದ್ದು, 24ನೇ ಸ್ಥಾನದಿಂದ 28ನೇ ಸ್ಥಾನಕ್ಕೆ ಇಳಿಕೆಯಾಗಿದೆ. ಫ್ರಾನ್ಸ್ ಸೇರಿದಂತೆ ಇತರ ಪಾಶ್ಚಿಮಾತ್ಯ ದೇಶಗಳು ನಾಲ್ಕು ಅಂಕಗಳನ್ನು ಕಳೆದುಕೊಂಡು 67 ಕ್ಕೆ ಮತ್ತು ಐದು ಸ್ಥಾನಗಳನ್ನು ಕಳೆದುಕೊಂಡು 25 ನೇ ಸ್ಥಾನಕ್ಕೆ ಇಳಿದಿವೆ. ಜರ್ಮನಿ ಮೂರು ಅಂಕಗಳನ್ನು ಕಳೆದುಕೊಂಡು 75 ಕ್ಕೆ ಮತ್ತು ಆರು ಸ್ಥಾನಗಳನ್ನು ಕಳೆದುಕೊಂಡು 15 ನೇ ಸ್ಥಾನಕ್ಕೆ ತಲುಪಿದೆ. ಕೆನಡಾ ಒಂದು ಅಂಕ ಮತ್ತು ಮೂರು ಸ್ಥಾನಗಳನ್ನು ಕಳೆದುಕೊಂಡಿದೆ.

ಅತಿ ಹೆಚ್ಚು ಭ್ರಷ್ಟಾಚಾರ! ದಕ್ಷಿಣ ಸುಡಾನ್‌ಗೆ ಕೊನೆಯ ಸ್ಥಾನ: ದಕ್ಷಿಣ ಸುಡಾನ್ ಕೇವಲ 8 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದ್ದರೆ, ಸೊಮಾಲಿಯಾ 9 ಅಂಕಗಳೊಂದಿಗೆ ಮತ್ತು ವೆನೆಜುವೆಲಾ 10 ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಸಿರಿಯಾ 12 ಅಂಕಗಳನ್ನು ಗಳಿಸಿದರೆ, ಈಕ್ವೆಟೋರಿಯಲ್ ಗಿನಿಯಾ, ಎರಿಟ್ರಿಯಾ, ಲಿಬಿಯಾ ಮತ್ತು ಯೆಮೆನ್ 13 ಅಂಕಗಳನ್ನು ಗಳಿಸಿವೆ. ನಿಕರಾಗುವಾ 14 ಅಂಕಗಳನ್ನು ಗಳಿಸಿದರೆ, ಸುಡಾನ್ ಮತ್ತು ಉತ್ತರ ಕೊರಿಯಾ 15 ಅಂಕಗಳನ್ನು ಗಳಿಸಿವೆ.

ಇದನ್ನೂ ಓದಿ: ಎಲ್ಲವನ್ನು ಉಚಿತವಾಗಿ ಕೊಟ್ಟರೆ ಜನ ಕೆಲಸ ಮಾಡಲ್ಲ; ಫ್ರೀ ಯೋಜನೆಗಳಿಗೆ ಸುಪ್ರೀಂ​ ಅಸಮಾಧಾನ - SC DEPRECATES ON FREEBIES

ABOUT THE AUTHOR

...view details