ನವದೆಹಲಿ:ಪ್ರಾಣಾಂತಕ ಮಂಕಿಪಾಕ್ಸ್ ಕಾಯಿಲೆಯ ಮತ್ತೊಂದು ಪ್ರಕರಣ ಭಾರತದಲ್ಲಿ ವರದಿಯಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾದ 'ಕ್ಲಾಡ್ 1 ಬಿ' ಮಾದರಿಯ ವೈರಸ್ ಇದಾಗಿದೆ ಎಂದು ಗುರುತಿಸಲಾಗಿದೆ. ಕಳೆದ ವಾರ ಕೇರಳದ ವ್ಯಕ್ತಿಯಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಕೇರಳದ ಮಲಪ್ಪುರಂ ಮೂಲದ 38 ವರ್ಷದ ವ್ಯಕ್ತಿಯು ಇತ್ತೀಚೆಗೆ ಯುಎಇಯಿಂದ ಭಾರತಕ್ಕೆ ಆಗಮಿಸಿದ್ದ. ಈ ವೇಳೆ ತಪಾಸಣೆ ನಡೆಸಿದಾಗ ಎಂಪಾಕ್ಸ್ ರೋಗಲಕ್ಷಣಗಳನ್ನು ಹೊಂದಿದ್ದ. ವೈದ್ಯಕೀಯ ಪರೀಕ್ಷೆಯಲ್ಲಿ ಡೇಂಜರಸ್ ಕ್ಲಾಡ್ 1 ಮಾದರಿಯ ವೈರಸ್ ಎಂದು ದೃಢಪಟ್ಟಿದೆ. ಸದ್ಯ ಸೋಂಕಿತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು 2022 ರಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದಾಗಿನಿಂದ, ಭಾರತದಲ್ಲಿ 30 ಪ್ರಕರಣಗಳು ವರದಿಯಾಗಿವೆ.
ಚೇತರಿಸಿಕೊಂಡ 'ಕ್ಲಾಡ್ 2' ಸೋಂಕಿತ:ಕೆಲ ದಿನಗಳ ಹಿಂದೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಸ್ ಕಂಡುಬಂದಿತ್ತು. ಆದರೆ, ಇದು ಅಪಾಯಕಾರಿ ಅಲ್ಲದ ಕ್ಲಾಡ್-2 ಮಾದರಿಯಾಗಿತ್ತು. ಸೋಂಕಿತ ವ್ಯಕ್ತಿ ಎರಡು ವಾರಗಳ ಕಾಲ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ ಚೇತರಿಸಿಕೊಂಡಿದ್ದು, ಆತನನ್ನು ಸೆಪ್ಟೆಂಬರ್ 21 ರಂದು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.