ಮುಂಬೈ, ಮಹಾರಾಷ್ಟ್ರ: ಜಾಗತಿಕ ಭದ್ರತೆ, ಆರ್ಥಿಕತೆ ಮತ್ತು ಭೌಗೋಳಿಕ ರಾಜಕೀಯ ಚಲನಶೀಲತೆಯ ದಿಕ್ಕು ನಿರ್ಧರಿಸುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬುಧವಾರ ಇಲ್ಲಿ ಮೂರು ನೌಕಾ ಯುದ್ಧನೌಕೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿ ಅವರು ಮಾತನಾಡಿದರು.
ಇಂಡೋ-ಪೆಸಿಫಿಕ್ ಪ್ರದೇಶವು ಯಾವಾಗಲೂ ಮುಕ್ತ, ಸುರಕ್ಷಿತ, ಅಂತರ್ಗತ ಮತ್ತು ಸಮೃದ್ಧವಾಗಿರಬೇಕೆಂದು ಭಾರತ ಬಯಸುತ್ತದೆ ಎಂದು ಮೋದಿ ಹೇಳಿದರು. ವಿಧ್ವಂಸಕ ನೌಕೆ, ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಬುಧವಾರ ಮೊದಲ ಬಾರಿಗೆ ಒಟ್ಟಿಗೆ ನಿಯೋಜಿಸಿದ ನಂತರ ಮಾತನಾಡಿದ ಅವರು, ಈ ಮೂರೂ ಯುದ್ಧ ನೌಕೆಗಳು 'ಮೇಡ್ ಇನ್ ಇಂಡಿಯಾ' ಆಗಿವೆ ಎಂದು ಹೇಳಿದರು.
'ಆತ್ಮನಿರ್ಭರ ಭಾರತ್' ಉಪಕ್ರಮವು ದೇಶವನ್ನು ಬಲಪಡಿಸಿದೆ ಮತ್ತು ಸ್ವಾವಲಂಬಿಯನ್ನಾಗಿ ಮಾಡಿದೆ. ಭಾರತವು ಪ್ರಮುಖ ಕಡಲ ಶಕ್ತಿಯಾಗುತ್ತಿದೆ ಮತ್ತು ವಿಶ್ವದ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ ಎಂದು ಅವರು ನುಡಿದರು.
"ಕಡಲನ್ನು ಮಾದಕವಸ್ತುಗಳು, ಶಸ್ತ್ರಾಸ್ತ್ರಗಳು ಮತ್ತು ಭಯೋತ್ಪಾದನೆಯಿಂದ ಮುಕ್ತಗೊಳಿಸುವ ಪ್ರಯತ್ನಗಳಲ್ಲಿ ನಾವು ಜಾಗತಿಕ ಪಾಲುದಾರರಾಗಬೇಕಿದೆ. ಅಲ್ಲದೇ ಕಡಲನ್ನು ಸುರಕ್ಷಿತ ಮತ್ತು ಸಮೃದ್ಧವಾಗಿಸಬೇಕಿದೆ. ಭಾರತವು ಪ್ರಮುಖ ಕಡಲ ಶಕ್ತಿಯಾಗುತ್ತಿದೆ ಮತ್ತು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಪಾಲುದಾರನಾಗಿ ಗುರುತಿಸಲ್ಪಟ್ಟಿದೆ" ಎಂದು ಅವರು ಹೇಳಿದರು.