ಝಾನ್ಸಿ (ಉತ್ತರಪ್ರದೇಶ):ಆಪರೇಷನ್ ಸಮಯದಲ್ಲಿ ಹೊಟ್ಟೆಯಲ್ಲಿ ಕತ್ತರಿ, ಕೈ ಗ್ಲೌಸ್, ಸಣ್ಣಪುಟ್ಟ ವಸ್ತುಗಳನ್ನು ಬಿಟ್ಟು ನಂತರ ಪೇಚಾಡಿದ ವರದಿಗಳನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲೊಬ್ಬ ವೈದ್ಯರು ಆಪರೇಷನ್ ನಡುಮಧ್ಯೆ ಹಸಿವಾಯಿತು ಎಂದು ದೋಸೆ ತಿನ್ನಲು 2 ಗಂಟೆ ಹೊರಹೋಗಿ, ಬಳಿಕ ಬಂದು ಆಪರೇಷನ್ ಪೂರ್ಣಗೊಳಿಸಿದ್ದಾನೆ. ಇಲ್ಲೇ ನೋಡಿ ಸಮಸ್ಯೆಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ಸಂತ್ರಸ್ತೆ ಈಗ ದೊಡ್ಡ ಸಮಸ್ಯೆ ಎದುರಿಸುವಂತಾಗಿದೆ.
ಬಾಲಕಿಗೆ ಕೈಗೆ ಆಪರೇಷನ್ ಮಾಡಲಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಈಗ ಆಕೆಯ ಕೈ ಬೆರಳುಗಳು ವಕ್ರವಾಗುತ್ತಿವೆ. ಇದಕ್ಕೆ ವೈದ್ಯರೇ ಕಾರಣ ಎಂದು ಆಕೆ ದೂರಿದ್ದಾಳೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ದೂರು ನೀಡಿದರೂ, ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ದೂರು ನೀಡಲು ಆಕೆ ಮುಂದಾಗಿದ್ದಾಳೆ.
ಪ್ರಕರಣದ ವೃತ್ತಾಂತ ಹೀಗಿದೆ:ಝಾನ್ಸಿಯ ನವಾಬಾದ್ ಪ್ರದೇಶದ ನಿವಾಸಿ ಕಾಜಲ್ ಶರ್ಮಾ ಆಪರೇಷನ್ಗೆ ಒಳಗಾದ ಬಾಲಕಿ. ಮನೆಯಲ್ಲಿ ಬಿದ್ದಾಗ ಎಡಗೈಗೆ ಗಾಯವಾಗಿತ್ತು. ಗುರುಗಾಂವ್ನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಲಾಯಿತು. ಅಲ್ಲಿನ ಡಾಕ್ಟರ್ ಇವರಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದಾರೆ. ಅದರಂತೆ ಡಿಸೆಂಬರ್ 22 ಎಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಲಾಗಿತ್ತು.
ಅಂದು, ಬಾಲಕಿಯನ್ನು ಆಪರೇಷನ್ ಥಿಯೇಟರ್ಗೆ ಕರೆದೊಯ್ದ ಬಳಿಕ ಹಿರಿಯ ವೈದ್ಯರ ಬದಲಿಗೆ ಆತನ ಪುತ್ರ ಶಸ್ತ್ರಚಿಕಿತ್ಸೆ ನಡೆಸುತ್ತಾನೆ ಎಂದು ತಿಳಿದುಬಂದಿದೆ. ಇದರಿಂದ ಕುಟುಂಬ ತುಸು ಗಾಬರಿಯಾಗಿದೆ. ಬಳಿಕ ಇದಕ್ಕೆ ಒಪ್ಪಿದ್ದಾರೆ. ಬಾಲಕಿಯ ಕೈಗೆ ಮತ್ತು ಬರುವ ಇಂಜೆಕ್ಷನ್ ನೀಡಿ, ಆಪರೇಷನ್ ಆರಂಭಿಸಲಾಗಿದೆ. ಚಿಕಿತ್ಸೆಯ ಅರ್ಧದಲ್ಲಿ ವೈದ್ಯರಿಗೆ ಹಸಿವೆ ಕಾಣಿಸಿಕೊಂಡಿದೆ.