ನವದೆಹಲಿ: ದೇಶದಲ್ಲಿ ಈಗಾಗಲೇ ಬೇಸಿಗೆಯ ಬಿಸಿಲು ಆವರಿಸಿದ್ದು, ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದ ಹಲವು ಭಾಗಗಳಲ್ಲಿ ಮುಂದಿನ ಎರಡು ದಿನದಲ್ಲಿ ಗರಿಷ್ಠ 2 ರಿಂದ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಳವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಐಎಂಡಿಯ ಬುಧವಾರದ ಬೆಳಗಿನ ಮುಖ್ಯಾಂಶದ ವರದಿ ಅನುಸಾರ, 2024ರ ಏಪ್ರಿಲ್ 5ರಂದು ಪಶ್ಚಿಮದ ಹಿಮಾಲಯ ಪ್ರದೇಶದಲ್ಲಿ ಹೊಸ ಅಡಚಣೆಯೊಂದು ಎದುರಾಗಲಿದೆ. ಇದರಿಂದ ಮುಂದಿನ ಐದು ದಿನ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಮಧ್ಯಮ ಪ್ರಮಾಣದ ಮಳೆ ಅಥವಾ ಹಿಮಪಾತವಾಗಲಿದೆ ಎಂದು ಮುನ್ಸೂಚನೆ ಇದೆ. ಇನ್ನು ವಾಯುವ್ಯ ಭಾರತದ ಬಯಲು ಪ್ರದೇಶದಲ್ಲೂ ಕೂಡ ಏಪ್ರಿಲ್ 3 ರಿಂದ 5ರವರೆಗೆ ಸಾಧಾರಣಾ ತುಂತುರು ಮಳೆ ಆಗುವ ಸಾಧ್ಯತೆ ಇದೆ.
ಮುಂದಿನ ಏಳು ದಿನದಲ್ಲಿ ಜಾರ್ಖಂಡ್, ಒಡಿಶಾ, ಗೋವಾ, ಮರಾಠವಾಡ, ಮಧ್ಯಪ್ರದೇಶದ ಕೆಲವು ಭಾಗ, ಛತ್ತೀಸ್ಗಢ, ಕರ್ನಾಟಕ, ಕೇರಳ, ತೆಲಂಗಾಣದಲ್ಲಿ ಕೂಡ ಏಪ್ರಿ 6-9ರವರೆಗೆ ಮಳೆ ಆಗುವ ನಿರೀಕ್ಷೆ ಇದೆ. ಈಶಾನ್ಯ ಪ್ರದೇಶದಲ್ಲಿ ಕೂಡ ಏಪ್ರಿಲ್ 3 -5ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 6- 9ರವರೆಗೆ ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಸಿಕ್ಕಿಂ ಮತ್ತು ತ್ರಿಪುರಾದಲ್ಲಿ ಕೂಡ ಮುಂದಿನ ಏಳು ದಿನ ಚದುರಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಹೀಗಿರಲಿದೆ ಹವಾಮಾನ: ಮಧ್ಯಪ್ರದೇಶ, ಮರಾಠವಾಡ, ಸೌರಾಷ್ಟ್ರ, ಕೊಂಕಣ್ ಮತ್ತು ಗೋವಾ, ತೆಲಂಗಾಣ ಮತ್ತು ಕರ್ನಾಟಕದ ಕೆಲವು ಭಾಗದಲ್ಲಿ ಮುಂದಿನ ಎರಡು ದಿನ ಒಣ ಹವೆ ಮುಂದುವರೆಯಲಿದ್ದು, ಏಪ್ರಿಲ್ 6 - 9ರವರೆಗೆ ಹಗುರ ಮಳೆಯಾಗುವ ಸಾಧ್ಯತೆ ಇದೆ.