ವಯನಾಡು(ಕೇರಳ):ಇನ್ನು ಮುಂದೆ ನಾನು ಕೇರಳದ ವಯನಾಡು ಕ್ಷೇತ್ರದ ಅನಿಧಿಕೃತ ಸಂಸದನಾಗಿ ಮುಂದುವರಿಯುವೆ ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ತಾವು ಇದೇ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದನ್ನು ಸ್ಮರಿಸಿದ ರಾಹುಲ್ ಗಾಂಧಿ, ಕ್ಷೇತ್ರವನ್ನು ಸಹೋದರಿ ಪ್ರಿಯಾಂಕಾಗೆ ಬಿಟ್ಟು ಕೊಡುತ್ತಿದ್ದೇನೆ. ಆದರೆ, ನಾನು ಈ ಕ್ಷೇತ್ರದ ಅನಧಿಕೃತ ಸಂಸದನಾಗಿರುವೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, "ಸಂಸತ್ತಿನಲ್ಲಿ ಇಬ್ಬರು ಸಂಸದರನ್ನು ಹೊಂದಿರುವ ದೇಶದ ಏಕೈಕ ಕ್ಷೇತ್ರವಾಗಿ ವಯನಾಡು ಇರಲಿದೆ. ಉಪ ಚುನಾವಣೆಯಲ್ಲಿ ಗೆದ್ದ ಪ್ರಿಯಾಂಕಾ ಅಧಿಕೃತ ಸಂಸದೆಯಾಗಲಿದ್ದಾರೆ. ನಾನು ಕೂಡ ಪರೋಕ್ಷ ಸಂಸದನಾಗಿ ಮಂದುವರೆಯುವೆ" ಎಂದು ತಿಳಿಸಿದರು.
ಇದಕ್ಕೂ ಮೊದಲು ವಯನಾಡಿನಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ರಾಹುಲ್, "ವಯನಾಡಿನ ಜನರು ಪ್ರಿಯಾಂಕಾ ಗಾಂಧಿ ತಮ್ಮ ಮಗಳಂತೆ ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಇಲ್ಲಿನ ಜನರಿಗಾಗಿ ನನ್ನ ತಂಗಿ ಮತ್ತು ನಾನು ಒಟ್ಟಾಗಿ ಶ್ರಮಿಸುತ್ತೇವೆ. ನಮ್ಮ ತಂದೆ (ರಾಜೀವ್ ಗಾಂಧಿ) ತೀರಿಕೊಂಡಾಗ ಪ್ರಿಯಾಂಕಾ ತನ್ನ ತಾಯಿಯನ್ನು ಜತನದಿಂದ ನೋಡಿಕೊಂಡರು. ಆಕೆ ತನ್ನ ಕುಟುಂಬಕ್ಕಾಗಿ ತ್ಯಾಗ ಮಾಡುವ ವ್ಯಕ್ತಿ. ವಯನಾಡಿನ ಜನರನ್ನು ತನ್ನ ಕುಟುಂಬವೆಂದು ಪರಿಗಣಿಸುತ್ತಾಳೆ. ಹಾಗಾಗಿ, ಆಕೆ ತನ್ನ ಸಂಪೂರ್ಣ ಶಕ್ತಿಯನ್ನು ಇಲ್ಲಿನ ಜನರಿಯಾಗಿ ಮುಡಿಪಿಡಲಿದ್ದಾಳೆ" ಎಂದರು.