ಕೋಲ್ಕತಾ(ಪಶ್ಚಿಮ ಬಂಗಾಳ): ನೀವು ನಮ್ಮ ದೇಶದ ಭೂಮಿ ಆಕ್ರಮಿಸಿಕೊಳ್ಳಲು ಯತ್ನಿಸಿದರೆ ನಾವೇನು ಲಾಲಿಪಾಪ್ ತಿನ್ತಿರ್ತೀವಾ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾಂಗ್ಲಾದೇಶದ ರಾಜಕಾರಣಿಗಳಿಗೆ ಸೋಮವಾರ ತಿರುಗೇಟು ಕೊಟ್ಟಿದ್ದಾರೆ. ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ಬಾಂಗ್ಲಾದೇಶ ಕಾನೂನುಬದ್ಧ ಅಧಿಕಾರ ಹಕ್ಕುಗಳಿವೆ ಎಂಬ ಬಾಂಗ್ಲಾದೇಶದ ಕೆಲ ರಾಜಕಾರಣಿಗಳ ಹೇಳಿಕೆಗೆ ಮಮತಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಜನತೆ ಶಾಂತವಾಗಿರುವಂತೆ ಮತ್ತು ಬಾಂಗ್ಲಾದೇಶದ ರಾಜಕಾರಣಿಗಳ ಹೇಳಿಕೆಗಳಿಂದ ಪ್ರಚೋದಿತರಾಗದಂತೆ ಮನವಿ ಮಾಡಿದರು. ಅಲ್ಲದೆ ಕೇಂದ್ರವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಹೇಳಿದರು.
ಇತ್ತೀಚೆಗೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಕೆಲವು ಬಾಂಗ್ಲಾದೇಶದ ನಾಯಕರನ್ನು ಗೇಲಿ ಮಾಡಿದ ಅವರು, "ಶಾಂತವಾಗಿರಿ, ಆರೋಗ್ಯಕರವಾಗಿರಿ ಮತ್ತು ಮನಸ್ಸಿನ ಶಾಂತಿಯನ್ನು ಹೊಂದಿರಿ" ಎಂದು ಹೇಳಿದರು. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ ಪಿ) ಇತ್ತೀಚೆಗೆ ಢಾಕಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಬಂಗಾಳ, ಬಿಹಾರ ಮತ್ತು ಒಡಿಶಾದ ಮೇಲೆ ದೇಶವು ಕಾನೂನುಬದ್ಧ ಅಧಿಕಾರ ಹೊಂದಿದೆ" ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿನ ಕೆಲವರ ಪ್ರಚೋದನಕಾರಿ ಹೇಳಿಕೆಗಳಿಂದ ಪ್ರಭಾವಿತರಾಗದಂತೆ ಮತ್ತು ಶಾಂತವಾಗಿರುವಂತೆ ಪಶ್ಚಿಮ ಬಂಗಾಳದ ಜನರಿಗೆ ಮನವಿ ಮಾಡಿದ ಅವರು, ನಮ್ಮ ರಾಜ್ಯದಲ್ಲಿ ಇಮಾಮ್ಗಳು ಸಹ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿದ್ದಾರೆ ಎಂದು ಹೇಳಿದರು.