ನವದೆಹಲಿ: ದೆಹಲಿ ವಿಧಾನಸಭಾ ಅಧಿವೇಶನ ಮುಂದುವರೆದಿದೆ. ಮಾರ್ಚ್ 4 ರಂದು ಹಣಕಾಸು ಸಚಿವ ಅತಿಶಿ ಅವರು ಮಂಡಿಸಿದ ದೆಹಲಿ ಬಜೆಟ್ ಬಗ್ಗೆ ಸತತ ಮೂರು ದಿನಗಳ ಚರ್ಚೆ ನಡೆಯಿತು. ಬಜೆಟ್ ಭಾಷಣದ ಮೇಲೆ ಸಿಎಂ ಅರವಿಂದ್ ಕೇಜ್ರಿವಾಲ್ ಮಾತನಾಡಿದರು. ಅವರ ಉತ್ತರದ ಬಳಿಕ ಬಜೆಟ್ಗೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಲಾಯಿತು.
ಬಜೆಟ್ ಮೇಲಿನ ಚರ್ಚೆಯ ಕೊನೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ದೇಶದ ಮುಂದೆ ಅಭಿವೃದ್ಧಿಯ ಮಾದರಿ, ವಿನಾಶದ ಮಾದರಿ ಎಂಬ ಎರಡು ಮಾದರಿಗಳಿವೆ ಎಂದು ಪ್ರತಿಪಾದಿಸಿದರು. ಎರಡೂ ಮಾದರಿಗಳು ಈಗ ಚುನಾವಣೆಯಲ್ಲಿ ಗೆಲ್ಲುತ್ತಿವೆ. ಈಗ ದೇಶದ ಜನರು ಅವರಿಗೆ ಅಭಿವೃದ್ಧಿ ಬೇಕೋ ಅಥವಾ ದೇಶದ ವಿನಾಶ ಬೇಕೋ ಎಂದು ನಿರ್ಧರಿಸಬೇಕು. ಈ ಯುಗದಲ್ಲಿ ಶ್ರೀರಾಮ ಇದ್ದಿದ್ದರೂ ಕೂಡಾ ಬಿಜೆಪಿಯವರು ಇಡಿ- ಐಟಿ ಮತ್ತು ಸಿಬಿಐ ಅನ್ನು ಅವರ ಮನೆಗೆ ಕಳುಹಿಸುತ್ತಿದ್ದರು ಎಂದು ಕೇಜ್ರಿವಾಲ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್, ಇದುವರೆಗೂ ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಮನೀಶ್ ಸಿಸೋಡಿಯಾ ಅವರನ್ನು ಮರೆಯಲು ಸಾಧ್ಯವಿಲ್ಲ. ಅವರು ಮುಂದಿನ ವರ್ಷ ದೆಹಲಿಯ ಬಜೆಟ್ ಮಂಡಿಸುತ್ತಾರೆ ಎಂದು ನಾವು ಭಾವಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕೇಜ್ರಿವಾಲ್ ವಿಧಾನಸಭೆಯಲ್ಲಿ ತಮ್ಮ ಸರ್ಕಾರ ರಚನೆಯಿಂದ ಇಲ್ಲಿಯವರೆಗೆ ನಡೆದ ಎಲ್ಲ ವಿದ್ಯಮಾನಗಳನ್ನು ವಿವರಿಸಿದರು.