ಕರ್ನಾಟಕ

karnataka

ETV Bharat / bharat

ಇನ್ನು ತೆಲಂಗಾಣಕ್ಕೆ ಮಾತ್ರ ಹೈದರಾಬಾದ್ ರಾಜಧಾನಿ: ಆಂಧ್ರಪ್ರದೇಶದ ಸಾಮಾನ್ಯ 'ಕ್ಯಾಪಿಟಲ್'​ ಅವಧಿ ಮುಕ್ತಾಯ - Hyderabad Capital

ಹೈದರಾಬಾದ್​ ನಗರ ಇನ್ನು ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿಯಲಿದೆ. ಆಂಧ್ರಪ್ರದೇಶದ 'ಕಾಮನ್ ಕ್ಯಾಪಿಟಲ್'​ ಅವಧಿ ಇಂದಿಗೆ ಮುಗಿದಿದೆ. ಆಂಧ್ರದಲ್ಲಿ ರಚನೆಯಾಗುವ ಹೊಸ ಸರ್ಕಾರಕ್ಕೆ ರಾಜಧಾನಿ ಗುರುತಿಸುವ ಸವಾಲಿದೆ.

ತೆಲಂಗಾಣಕ್ಕೆ ಮಾತ್ರ ಹೈದರಾಬಾದ್ ರಾಜಧಾನಿ
ಚಾರ್‌ಮಿನಾರ್ (ETV Bharat)

By PTI

Published : Jun 2, 2024, 5:20 PM IST

ಹೈದರಾಬಾದ್:ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ಕೇಂದ್ರವಾಗಿ ಗುರುತಿಸಿಕೊಂಡಿರುವ ಹೈದರಾಬಾದ್​​ ಇನ್ನು ತೆಲಂಗಾಣದ ಪೂರ್ಣ ರಾಜಧಾನಿಯಾಗಲಿದೆ. ಆಂಧ್ರಪ್ರದೇಶಕ್ಕೂ ರಾಜಧಾನಿಯಾಗಿದ್ದ ನಗರವು ಭಾನುವಾರದಿಂದ (ಜೂನ್​ 2) ಎಲ್ಲ ನಂಟು ಕಡಿದುಕೊಳ್ಳಲಿದೆ. ಇದರಿಂದ ಆಂಧ್ರವು ಹೊಸ ರಾಜಧಾನಿಯನ್ನು ಗುರುತಿಸಿಕೊಳ್ಳುವ ಬಗ್ಗೆ ಚಿಂತಿಸಬೇಕಿದೆ.

ಅವಿಭಜಿತ ಆಂಧ್ರಪ್ರದೇಶ ಇಬ್ಭಾಗವಾಗಿ ಇಂದಿಗೆ 10 ವರ್ಷ ಕಳೆಯಿತು. 2014ರ ಜೂನ್​ 2ರಂದು ತೆಲಂಗಾಣ ರಾಜ್ಯವು ಅಸ್ತಿತ್ವಕ್ಕೆ ಬಂದಿತ್ತು. ಆ ವೇಳೆ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ, ಮುಂದಿನ 10 ವರ್ಷ ತೆಲಂಗಾಣ ಮತ್ತು ಆಂಧ್ರಪ್ರದೇಶದ ಸಾಮಾನ್ಯ ರಾಜಧಾನಿಯಾಗಿ ಹೈದರಾಬಾದ್​ ಮುಂದುವರಿಯಲಿದೆ ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ ಆ ಅವಧಿ ಮುಗಿದಿದೆ.

10 ವರ್ಷ ಸಾಮಾನ್ಯ ರಾಜಧಾನಿ ಒಪ್ಪಂದ:ಕಾಯ್ದೆಯ ನಿಯಮಾವಳಿ ಪ್ರಕಾರ, ಹೈದರಾಬಾದ್​ ನಗರವು 10 ವರ್ಷಗಳ ಕಾಲ ಎರಡೂ ತೆಲುಗು ರಾಷ್ಟ್ರಗಳಿಗೆ ಸಾಮಾನ್ಯ ರಾಜಧಾನಿಯಾಗಿರಲಿದೆ. ಈ ಅವಧಿ ಮುಗಿದ ಬಳಿಕ ತೆಲಂಗಾಣಕ್ಕೆ ಮಾತ್ರ ರಾಜಧಾನಿಯಾಗಿ ಉಳಿಯಲಿದೆ. ಆಂಧ್ರಪ್ರದೇಶ ಹೊಸ ಕ್ಯಾಪಿಟಲ್ ಅನ್ನು ಗುರುತಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ತೆಲಂಗಾಣ ರಾಜ್ಯ ಉದಯವಾದ ಬಳಿಕ ಹೈದರಾಬಾದ್​ನಿಂದ ಆಂಧ್ರಪ್ರದೇಶವು ಅಧಿಕಾರ ನಡೆಸಲು ಲೇಕ್​ ವ್ಯೂ ಸರ್ಕಾರಿ ಅತಿಥಿ ಗೃಹ, ಕಾರ್ಯಾಲಯ ಸಂಕೀರ್ಣ ಸೇರಿದಂತೆ ಕೆಲವು ಕಟ್ಟಡಗಳನ್ನು ಹಂಚಿಕೆ ಮಾಡಲಾಗಿತ್ತು. ಅಲ್ಲಿಂದ ಆಂಧ್ರ ಸರ್ಕಾರ ಅಧಿಕಾರ ನಡೆಸಬಹುದಾಗಿತ್ತು.

ಬಗೆಹರಿಯದ ರಾಜಧಾನಿ ಗೊಂದಲ:ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಸರ್ಕಾರ ಹೈದರಾಬಾದ್​ ಬದಲಿಗೆ ಅಮರಾವತಿಯನ್ನು ರಾಜಧಾನಿಯನ್ನಾಗಿ ರೂಪಿಸಲು ಕ್ರಮ ಕೈಗೊಂಡಿತ್ತು. ಇಲ್ಲಿನ ಸರ್ಕಾರಿ ಕಚೇರಿಗಳನ್ನು ಅಮರಾವತಿಗೆ ವರ್ಗ ಮಾಡಿತ್ತು. ಆದರೆ, ಬಳಿಕ ಬಂದ ವೈಎಎಸ್​ಆರ್‌ಸಿಪಿ ಸರ್ಕಾರ ರಾಜಧಾನಿ ವಿಚಾರದಲ್ಲಿ ಗೊಂದಲದಲ್ಲಿದೆ. ಸಿಎಂ ಜಗನ್​​ ಮೋಹನ್ ​ರೆಡ್ಡಿ ಅವರು ಮೂರು ರಾಜಧಾನಿಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದರು.

ಆದರೆ, ಈವರೆಗೂ ಅಧಿಕೃತವಾಗಿ ಆಂಧ್ರಪ್ರದೇಶಕ್ಕೆ ರಾಜಧಾನಿ ಇಲ್ಲವಾದ್ದರಿಂದ ಹೈದರಾಬಾದ್​ನಲ್ಲಿ ಸರ್ಕಾರಿ ಕಟ್ಟಡಗಳನ್ನೂ ಅಲ್ಲಿನ ಸರ್ಕಾರ ಬಳಸಿಕೊಳ್ಳುತ್ತಿತ್ತು. ಇದೀಗ ಅದರ ಅವಧಿಯು ಸಂಪೂರ್ಣ ಮುಗಿದ ಕಾರಣ, ತೆಲಂಗಾಣದ ಸಿಎಂ ರೇವಂತ್​ ರೆಡ್ಡಿ ಅವರು ಸರ್ಕಾರಿ ಕಟ್ಟಡಗಳನ್ನು ಸುಪರ್ದಿಗೆ ಪಡೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ, ಈ ಬಗ್ಗೆ ಆಂಧ್ರ ಸರ್ಕಾರ ತೆಲಂಗಾಣಕ್ಕೆ ಪತ್ರ ಬರೆದು, ಅವಧಿಯನ್ನು ವಿಸ್ತರಿಸಲು ಕೋರಿತ್ತು. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಬಗ್ಗೆ ಸಿಎಂ ರೇವಂತ್​ ರೆಡ್ಡಿ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಎರಡೂ ರಾಷ್ಟ್ರಗಳು ಇಬ್ಭಾಗವಾಗಿ ಹತ್ತು ವರ್ಷಗಳ ನಂತರವೂ, ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಆಸ್ತಿಗಳ ವಿಭಜನೆಯಂತಹ ಹಲವಾರು ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

ಇದನ್ನೂ ಓದಿ:ಲೋಕಸಭಾ ಚುನಾವಣೆ: ಮತ ಎಣಿಕೆಗೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆ, ಬೆಳಗ್ಗೆ 8ಕ್ಕೆ ಕೌಂಟಿಂಗ್‌ ಶುರು - Lok Sabha Election

ABOUT THE AUTHOR

...view details