ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ಉಗ್ರರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ದೀಪಕ್ ಸಿಂಗ್ ಅವರಿಗೆ ಇಂದು ಬೆಳಗ್ಗೆ ಜಮ್ಮುವಿನ ವಾಯುಪಡೆ ನಿಲ್ದಾಣದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
GOC ವೈಟ್ ನೈಟ್ ಕಾರ್ಪ್ಸ್ ಲೆಫ್ಟಿನೆಂಟ್ ಜನರಲ್ ನವೀನ್ ಸಚ್ದೇವ ಅವರು ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಕ್ಯಾಪ್ಟನ್ ದೀಪಕ್ ಸಿಂಗ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಜಮ್ಮು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಆನಂದ್ ಜೈನ್ ಅವರು ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸೇನೆಯ ವೈಟ್ ನೈಟ್ ಕಾರ್ಪ್ಸ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಹುತಾತ್ಮ ಯೋಧನ ಅಂತಿಮಸಂಸ್ಕಾರ ಕಾರ್ಯಕ್ರಮದಲ್ಲಿ, #GOC #WhiteKnightCorps ಭಾರತೀಯ ಸೇನೆಯ ಅತ್ಯುನ್ನತ ಸಂಪ್ರದಾಯಗಳಲ್ಲಿ ಅತ್ಯುನ್ನತ ತ್ಯಾಗ ಮಾಡಿದ #Braveheart ಕ್ಯಾಪ್ಟನ್ ದೀಪಕ್ ಸಿಂಗ್ ಅವರಿಗೆ ಪುಷ್ಪಗುಚ್ಛ ಅರ್ಪಿಸಿ, ಗೌರವ ಸಲ್ಲಿಸಲಾಯಿತು. ಅವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಬುಧವಾರ ನಡೆದ ಆಪರೇಷನ್ ಅಸರ್ ವೇಳೆ ಭಾರತೀಯ ಸೇನೆಯ 48ನೇ ರಾಷ್ಟ್ರೀಯ ರೈಫಲ್ಸ್‌ನ ಕ್ಯಾ.ದೀಪಕ್ ಸಿಂಗ್ ಹುತಾತ್ಮರಾಗಿದ್ದರು. ಗುರುವಾರ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಭಾರತೀಯ ಸೇನೆಯ ಎಲ್ಲಾ ಶ್ರೇಣಿಯ ಯೋಧರು, ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಕ್ಯಾಪ್ಟನ್ ದೀಪಕ್ ಸಿಂಗ್ ಅವರ ಸರ್ವೋಚ್ಚ ತ್ಯಾಗಕ್ಕೆ ಅಂತಿಮ ನಮನ ಸಲ್ಲಿಸಿದರು. ಅವರ ದುಃಖಿತ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತಪಡಿಸಿದರು.
ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ಹಿಲ್ ರೆಸಾರ್ಟ್ ಪಟ್ನಿಟಾಪ್‌ಗೆ ಹೊಂದಿಕೊಂಡಂತಿರುವ ದೋಡಾ ಜಿಲ್ಲೆಯ ಅಸ್ಸಾರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಕ್ಯಾಪ್ಟನ್ ಮತ್ತು ಒಬ್ಬ ಉಗ್ರನನ್ನು ಹೊಡೆದುರುಳಿಸಲಾಗಿದೆ. ಮೂಲಗಳ ಪ್ರಕಾರ, ಕ್ಯಾಪ್ಟನ್ ಸಿಂಗ್ ಅವರು ಸೈನಿಕರ ಮುಂದೆ ನಿಂತು ಮುನ್ನಡೆಸುತ್ತಿದ್ದರು. ಈ ವೇಳೆ ಅವರಿಗೆ ಗುಂಡೇಟು ತಗುಲಿದೆ. ಎನ್‌ಕೌಂಟರ್‌ನಲ್ಲಿ ಗಾಯಗೊಂಡಿದ್ದ ಕ್ಯಾಪ್ಟನ್ ದೀಪಕ್ ಸಿಂಗ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಕೊನೆಯುಸಿರೆಳೆದರು.
ಉಗ್ರರ ಜತೆಗಿನ ಗುಂಡಿನ ಚಕಮಕಿಯಲ್ಲಿ ಹಿರ್ನಿ ಗ್ರಾಮದ ನಾಗರಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎನ್‌ಕೌಂಟರ್ ಸ್ಥಳದಿಂದ ಭದ್ರತಾ ಪಡೆಗಳು ಎಂ4 ರೈಫಲ್, ಎಕೆ 47 ಮತ್ತು ನಾಲ್ಕು ರಕ್‌ಸಾಕ್‌ಗಳನ್ನು ವಶಪಡಿಸಿಕೊಂಡಿವೆ. ಉಗ್ರರನ್ನು ಸದೆಬಡಿಯಲು ದೋಡಾದಲ್ಲಿ ಮೂರನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ:ಜಮ್ಮ-ಕಾಶ್ಮೀರದಲ್ಲಿ ಮುಂದುವರಿದ ಎನ್‌ಕೌಂಟರ್: ಕ್ಯಾಪ್ಟನ್ ಹುತಾತ್ಮ, ನಾಲ್ವರು ಉಗ್ರರ ಹತ್ಯೆ - Doda Encounter