ನವದೆಹಲಿ:ಇತ್ತೀಚಗೆ ಮುಗಿದ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬಂದಿರುವ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಅವರು ಇಂದು (ಮಂಗಳವಾರ) ಆಮ್ ಆದ್ಮಿ ಪಕ್ಷದ ಸಂಚಾಲಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದಾರೆ.
ಚುನಾವಣಾ ಗೆಲುವಿನ ನಂತರ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿರುವ ಹೇಮಂತ್ ಸೊರೆನ್ ಅವರು ನವೆಂಬರ್ 28 ರಂದು ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸಲಿದ್ದಾರೆ. ಉಭಯ ನಾಯಕರ ನಡುವಿನ ಈ ಸಭೆ ಸಂಜೆ 7 ಗಂಟೆಗೆ ನಿಗದಿಯಾಗಿದೆ.
ಜೈಲಲ್ಲಿ ಕೇಜ್ರಿವಾಲ್ - ಸೊರೆನ್ ಒಡನಾಟ:ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಸಿಎಂ ಆಗಿದ್ದ ಹೇಮಂತ್ ಸೊರೆನ್, ಅಬಕಾರಿ ನೀತಿ ಹಗರಣದ ಆರೋಪದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ತಿಹಾರ್ ಜೈಲು ಸೇರಿದ್ದರು. ಇಬ್ಬರು ನಾಯಕರ ಮಧ್ಯೆ ಜೈಲಿನಲ್ಲಿ ಪರಸ್ಪರ ಒಡನಾಟ ಬೆಳೆದಿತ್ತು. ಈ ವೇಳೆ, ಕೇಜ್ರಿವಾಲ್ ಅವರ ಪತ್ನಿ, ಸೊರೆನ್ ಅವರ ಪತ್ನಿ ದೆಹಲಿಯಲ್ಲಿ ಭೇಟಿ ಮಾಡಿದ್ದರು. ಇದಾದ ಬಳಿಕ ಎರಡೂ ಕುಟುಂಬಗಳ ನಡುವೆ ಮತ್ತಷ್ಟು ಬಾಂಧವ್ಯ ಹೆಚ್ಚಿಸಿತ್ತು.