ಕೊಲ್ಲಂ: ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳವನ್ನು ಹೇಮಾ ಸಮಿತಿಯ ವರದಿಯು ಬಹಿರಂಗಪಡಿಸಿದ ನಂತರ, ಈ ವರದಿಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಗುರುವಾರ ಮೊದಲ ಬಂಧನ ಮಾಡಿದ್ದಾರೆ. ನಿರ್ದೇಶಕ ವಿ.ಕೆ. ಪ್ರಕಾಶ್ ಎಂಬುವರನ್ನು ಬಂಧಿಸಲಾಗಿದೆ.
ಬಂಧನ ಜಾಮೀನಿನ ಮೇಲೆ ಬಿಡುಗಡೆ:ಆದರೆ, ಈ ತಿಂಗಳ ಆರಂಭದಲ್ಲಿಯೇ ಕೇರಳ ಹೈಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ ನಿರ್ದೇಶಕ ಪ್ರಕಾಶ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಯುವ ಮಹಿಳಾ ಬರಹಗಾರ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಆಗಸ್ಟ್ 29 ರಂದು ಕೊಲ್ಲಂ ಪಲ್ಲಿತೋಟಂ ಪೊಲೀಸರು ನಟ-ನಿರ್ದೇಶಕ ಪ್ರಕಾಶ್ ವಿರುದ್ಧ ಸೆಕ್ಷನ್ 354 (ಎ) (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆಯೇ ಕೇರಳ ಹೈಕೋರ್ಟ್ ಮೊರೆ ಹೋಗಿದ್ದ ನಿರ್ದೇಶಕ ಪ್ರಕಾಶ್ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 'ತ್ರಿವೆಂಡ್ರಮ್ ಲಾಡ್ಜ್' (2012), 'ನಿರ್ನಾಯಕಂ' (2015), 'ಒರುಥಿ' (2022) ಮುಂತಾದ ಯಶಸ್ವಿ ಚಿತ್ರಗಳನ್ನು ಪ್ರಕಾಶ್ ನಿರ್ದೇಶಿಸಿದ್ದಾರೆ.
ಆಗಸ್ಟ್ನಲ್ಲಿ ಬಹಿರಂಗವಾಗಿದ್ದ ವರದಿ:ಆಗಸ್ಟ್ 19 ರಂದು ಹೇಮಾ ಸಮಿತಿಯ ವರದಿಯನ್ನು ಬಹಿರಂಗಗೊಳಿಸಲಾಗಿತ್ತು. ಆದರೆ ಇದರಲ್ಲಿನ ಕೆಲ ಭಾಗಗಳನ್ನು ಸೆನ್ಸಾರ್ ಮಾಡಲಾಗಿದೆ. ಈ ವರದಿ ಬಹಿರಂಗವಾದ ನಂತರ ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ವರದಿಯ ನಂತರ ಕೆಲ ಮಾಜಿ ನಟಿಯರು ತಮ್ಮ ಮೇಲಾದ ದೌರ್ಜನ್ಯದ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದರ ನಂತರ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದ 11 ಜನರ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ.