ಮುಂಬೈ: ವಾಣಿಜ್ಯ ನಗರಿಯಲ್ಲಿ ಮುಂಬೈನಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಹೆದ್ದಾರಿಗಳು ಜಲಾವೃತವಾಗಿವೆ. ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಶಾಲಾ ಕಾಲೇಜುಗಳು ಬೆಳಗಿನ ತರಗತಿಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.
ಮಧ್ಯರಾತ್ರಿ 1ರಿಂದ ಬೆಳಗ್ಗೆ 7 ಗಂಟೆಯವರೆಗೆ ಅಂದರೆ ಆರು ತಾಸಿನಲ್ಲಿ ದಾಖಲೆಯ 300 ಎಂಎಂ ಮಳೆ ಸುರಿದಿದೆ. ಮುಂದಿನ ಎರಡು ದಿನಗಳ ಕಾಲವೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ ಎಂದು ಬಿಎಂಸಿ ತಿಳಿಸಿದೆ.
ರೈಲು ಹಳಿಗಳಲ್ಲಿ ನೀರು ನಿಂತು ಕೇಂದ್ರ ರೈಲ್ವೆಯ ಸಬ್ ಅರ್ಬನ್ ಸೇವೆಗಳಲ್ಲಿ ಸಂಚಾರ ವ್ಯತ್ಯಯವಾಗಿದೆ. ಎರಡೂ ಸಿಆರ್ ಕಾರಿಡಾರ್‌ಗಳಲ್ಲಿ ಸಬ್ ಅರ್ಬನ್ ಸೇವೆಗಳು ಬೆಳಿಗ್ಗೆ 6.45ಕ್ಕೆ ಪುನರಾರಂಭಗೊಂಡವು ಎಂದು ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಮುಂಬೈ ನಿವಾಸಿಗಳ ಪ್ರಮುಖ ಸಾರಿಗೆ ನೆಟ್‌ವರ್ಕ್ ಸಬ್ ಅರ್ಬನ್ ಸಂಚಾರ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಜನರು ತೀವ್ರ ತೊಂದರೆ ಅನುಭವಿಸಿದರು. ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ನೆಟ್‌ವರ್ಕ್ ಪ್ರದೇಶ ಸೇರಿದಂತೆ ಥಾಣೆ, ಪಾಲ್ಘರ್ ಮತ್ತು ರಾಯಗಡ ರೈಲು ನಿಲ್ದಾಣಗಳಲ್ಲಿ ಭಾರೀ ಜನಸಮೂಹ ರೈಲು ಸೇವೆಗೆ ಕಾದು ನಿಂತಿರುವ ದೃಶ್ಯ ಕಂಡುಬಂತು.
ಇದರ ಜೊತೆಗೆ ಮುಂಬೈ-ಗುಜರಾತ್, ಮುಂಬೈ- ಪುಣೆ, ಮುಂಬೈ-ಕೊಲ್ಹಾಪುರ ಸೆಕ್ಟರ್ ರೈಲುಗಳು ರದ್ದು ಅಥವಾ ವಿಳಂಬವಾಗಿ ಪ್ರಯಾಣ ಬೆಳೆಸಿವೆ. ಸಾಂತಾಕ್ರೂಜ್, ಅಂಧೇರಿ, ಜೋಗೇಶ್ವರಿ, ಮಲಾಡ್, ಕಾಂದಿವಾಲ್ ಮತ್ತು ದಹಿಸರ್ ಸೇರಿದಂತೆ ಹಲವು ಸಬ್ವೇಗಳಲ್ಲಿ 3ರಿಂದ 5 ಅಡಿಗಳಷ್ಟು ನೀರು ನಿಂತಿದ್ದು, ಪೂರ್ವ ಪಶ್ಚಿಮ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ದಹಿಸರ್, ಬೊರಿವಲಿ, ಕಾಂದಿವಲಿ, ಮಲಾಡ್, ಜೋಗೇಶ್ವರಿ, ಅಂಧೇರಿ, ಸಾಂತಾಕ್ರೂಜ್, ಸಿಯಾನ್, ವಡಾಲಾ, ಕುರ್ಲಾ, ಘಾಟ್‌ಕೋಪರ್, ಭಾಂಡೂಪ್ ಮತ್ತು ಥಾಣೆಯಲ್ಲಿ ಜೋರು ಮಳೆಯಿಂದಾಗಿ ಅನೇಕ ಮನೆಗಳು ಜಲಾವೃತಗೊಂಡಿವೆ. ಸೇತುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ 54 ಜನರನ್ನು ರಕ್ಷಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಕನಿಷ್ಠ 275 ಮನೆಗಳು ಹಾನಿಗೊಳಗಾಗಿದ್ದು, ಸುಮಾರು 20 ವಾಹನಗಳು ಜಲಾವೃತವಾಗಿವೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಥಾಣೆಯಲ್ಲಿ 120.87 ಎಂಎಂಎ ಮಳೆಯಾಗಿದೆ. ಬೆಳೆಗ್ಗೆ 3.30 ರಿಂದ 4.30ರ ಒಂದೇ ಗಂಟೆಯಲ್ಲಿ 45.98 ಎಂಎಂಎ ಮಳೆ ಬಿದ್ದಿದೆ. ಜೂನ್ 1ರಿಂದ ನಗರದಲ್ಲಿ 858.87 ಎಂಎಂ ಮಳೆಯಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ನಗರ 917.90 ಎಂಎಂ ಮಳೆಯಾಗಿತ್ತು. (ಐಎಎನ್ಎಸ್/ಪಿಟಿಐ)
ಇದನ್ನೂ ಓದಿ:ಶಿರಡಿಗೆ ಹೋಗುವ ಪ್ಲ್ಯಾನ್ ಇದೆಯೇ? ಕೈಗೆಟುಕುವ ದರದಲ್ಲಿ IRCTC ಟೂರ್ ಪ್ಯಾಕೇಜ್!