ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಮತ್ತು ಪುತ್ರ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗುರುವಾರ ಭೇಟಿ ಮಾಡಿ ವಿವಿಧ ವಿಷಯಗಳನ್ನು ಚರ್ಚಿಸಿದ್ದಾರೆ.
ಪ್ರಧಾನಿ ಅಧಿಕೃತ ನಿವಾಸ 'ಲೋಕಕಲ್ಯಾಣ ಮಾರ್ಗ'ದಲ್ಲಿ ಮೋದಿ ಅವರನ್ನು ಭೇಟಿಯಾಗಿ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪಿಎಂ ಮೋದಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳ ಸೇಮತ ಮಾಹಿತಿ ಹಂಚಿಕೊಂಡಿದ್ದಾರೆ.
''ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗುವುದು ಗೌರವದ ಸಂಗತಿ. ವಿವಿಧ ವಿಷಯಗಳ ಬಗ್ಗೆ ಅವರ ಜಾಣ್ಮೆ ಮತ್ತು ದೃಷ್ಟಿಕೋನವು ಗಟ್ಟಿಯಾದ ಮೌಲ್ಯಯುತವಾಗಿದೆ. ಅಲ್ಲದೇ, ಅವರು ನನಗೆ ನೀಡಿದ ಕಲಾಕೃತಿಗೆ ನಾನು ಕೃತಜ್ಞನಾಗಿದ್ದೇನೆ. ಇದು ನನ್ನ ಇತ್ತೀಚಿನ ಕನ್ಯಾಕುಮಾರಿ ಭೇಟಿಯನ್ನು ನೆನಪಿಸಿದೆ'' ಎಂದು ಮೋದಿ ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಮೋದಿಯವರ ಪೋಸ್ಟ್ಅನ್ನು ಮರು ಹಂಚಿಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿ, ''ತಮಗೆ ಅನಂತ ಧನ್ಯವಾದಗಳು ನರೇಂದ್ರ ಮೋದಿ ಸರ್. ತಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿ ಆಗಿದ್ದೇನೆ'' ಎಂದು ಕನ್ನಡದಲ್ಲೇ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಬಜೆಟ್ ಘೋಷಣೆಗಳು ನಮ್ಮ ಪ್ರಣಾಳಿಕೆಯಿಂದ ಕದ್ದ ಅಂಶಗಳು: ಆದರೂ ಪರವಾಗಿಲ್ಲ ಜಾರಿ ಮಾಡಿ ಎಂದ ಕಾಂಗ್ರೆಸ್!