ನವದೆಹಲಿ: ಖಿನ್ನತೆಗೊಳಗಾದ ವಿಧವೆಯೊಬ್ಬರು ತನ್ನ 29 ವಾರಗಳ ಭ್ರೂಣದ ಗರ್ಭಪಾತ ಮಾಡಿಸಿಕೊಳ್ಳಲು ನೀಡಿದ್ದ ಅನುಮತಿಯನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಕೇಂದ್ರ ಸರ್ಕಾರದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಮಹಿಳೆಯ ಭ್ರೂಣದಲ್ಲಿರುವ ಮಗು ಜೀವಂತವಾಗಿ ಜನಿಸುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಹುಟ್ಟಲಿರುವ ಮಗುವಿನ ಜೀವಿಸುವ ಹಕ್ಕನ್ನು ರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ಅರ್ಜಿಯಲ್ಲಿ ತಿಳಿಸಿತ್ತು. ಭ್ರೂಣವನ್ನು 34 ವಾರ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಇಟ್ಟುಕೊಂಡರೆ ಯಾವುದೇ ಸಮಸ್ಯೆಯಿಲ್ಲ ಎಂದು ಏಮ್ಸ್ ಆಸ್ಪತ್ರೆ ಕೂಡ ತನ್ನ ಉತ್ತರದಲ್ಲಿ ತಿಳಿಸಿದೆ. ಭ್ರೂಣವನ್ನು ಇನ್ನೂ ಎರಡು ವಾರಗಳವರೆಗೆ ಇಟ್ಟುಕೊಳ್ಳಬಹುದು, ಹಾಗೆ ಮಾಡುವುದರಿಂದ ಮಹಿಳೆ ಮತ್ತು ಹುಟ್ಟಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಏಮ್ಸ್ ಹೇಳಿತ್ತು. ಇದರ ನಂತರ ಮಹಿಳೆಯ ಭ್ರೂಣವನ್ನು ತೆಗೆದುಹಾಕಲು ಅನುಮತಿ ನೀಡಿದ ಜನವರಿ 4 ರ ಆದೇಶವನ್ನು ನ್ಯಾಯಾಲಯ ಇದೀಗ ಹಿಂತೆಗೆದು ಕೊಂಡಿದೆ.
ಮಹಿಳೆಯ 29 ವಾರಗಳ ಭ್ರೂಣದ ಗರ್ಭಪಾತಕ್ಕೆ ಹೈಕೋರ್ಟ್ ಜನವರಿ 4 ರಂದು ಅನುಮತಿ ನೀಡಿತ್ತು. ಮಹಿಳೆಯ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ ಈ ಮಹತ್ವದ ಆದೇಶ ನೀಡಿತ್ತು. ಮಹಿಳೆಯ ಮಾನಸಿಕ ಸ್ಥಿತಿ ಉತ್ತಮವಾಗಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಗರ್ಭಧಾರಣೆಯನ್ನು ಮುಂದುವರಿಸುವುದು ಸರಿಯಲ್ಲ ಎಂದು ನ್ಯಾಯಾಲಯ ಆಗ ಹೇಳಿತ್ತು.