ಅಲಿಗಢ(ಉತ್ತರ ಪ್ರದೇಶ):ಹತ್ರಾಸ್ ಸತ್ಸಂಗ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಳಿತದಲ್ಲಿ 123 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಅಲಿಗಢದ ಪಿಲ್ಖಾನಾ ಗ್ರಾಮಕ್ಕೆ ಆಗಮಿಸಿ, ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಪಿಲ್ಖಾನಾ ಎಂಬಲ್ಲಿನ ಛೋಟಾಲಾಲ್ ಅವರ ಪತ್ನಿ ಮಂಜು, ಪುತ್ರ ಪಂಕಜ್, ಗ್ರಾಮದ ಪ್ರೇಮಾವತಿ, ಶಾಂತಿದೇವಿ ಎಂಬವರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇವರ ಕುಟುಂಬ ಸದಸ್ಯರು ರಾಹುಲ್ ಗಾಂಧಿ ಜೊತೆ ತಮ್ಮ ಅಳಲು ತೋಡಿಕೊಂಡರು.
ಇಲ್ಲಿಂದ ಹತ್ರಾಸ್ನ ನವಿಪುರ ಖುರ್ದ್ ವೈಭವ್ ನಗರದಲ್ಲಿರುವ ಗ್ರೀನ್ ಪಾರ್ಕ್‌ಗೆ ರಾಹುಲ್ ಗಾಂಧಿ ತೆರಳಲಿದರು. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮುನ್ನಿದೇವಿ ಮತ್ತು ಆಶಾದೇವಿ ಎಂಬ ಮಹಿಳೆಯರ ಕುಟುಂಬಗಳನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಸಂತ್ರಸ್ತೆಯ ಕುಟುಂಬ ಸದಸ್ಯರು ನೆಲದ ಮೇಲೆ ಕುಳಿತಿದ್ದರು. ರಾಹುಲ್ ಗಾಂಧಿ ಅವರಿಗೆ ಕುಳಿತುಕೊಳ್ಳಲು ಸ್ಟೂಲ್ ಇಡಲಾಗಿತ್ತು. ಆದರೆ, ಸ್ಟೂಲ್ ತೆಗೆದು ಪಕ್ಕಕ್ಕಿಟ್ಟ ರಾಹುಲ್, ಕುಟುಂಬ ಸದಸ್ಯರೊಂದಿಗೆ ನೆಲದ ಮೇಲೆಯೇ ಕುಳಿತುಕೊಂಡು ಸಂತ್ರಸ್ತರ ನೋವಿಗೆ ಕಿವಿಯಾದರು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಂತ್ರಸ್ತರ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.
ಇದನ್ನೂ ಓದಿ:ಹತ್ರಾಸ್ ಕಾಲ್ತುಳಿತ: ಮೃತರ ಸಂಖ್ಯೆ 123ಕ್ಕೇರಿಕೆ, 6 ಸಂಘಟಕರ ಸೆರೆ; ರಾಹುಲ್ ಭೇಟಿ ಸಾಧ್ಯತೆ - Hathras Stampede