ಕರ್ನಾಟಕ

karnataka

ETV Bharat / bharat

ದೀಪಾವಳಿ ಸಂಭ್ರಮ ಕಿತ್ತುಕೊಂಡ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸಾವು

ಆಗ್ರಾದ ಕುಟುಂಬವೊಂದು ಹತ್ರಾಸ್‌ನಲ್ಲಿ ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

HATHRAS ROAD ACCIDENT
ಹತ್ರಾಸ್​ ಜಿಲ್ಲಾಸ್ಪತ್ರೆ (ETV Bharat)

By ETV Bharat Karnataka Team

Published : Nov 2, 2024, 11:13 AM IST

ಆಗ್ರಾ, ಉತ್ತರಪ್ರದೇಶ: ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ಶುಕ್ರವಾರ ನಡೆದಿದೆ. ಚಂದ್ಪಾ ಪೊಲೀಸ್ ಠಾಣಾ ವ್ಯಾಪ್ತಿಯ ಕೇವಲ್‌ಗರ್ಹಿ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಸೋನಂ, ನಿತಾಯಿ, ರೂಬಿ, ಚೈತನ್ಯ, ಮಿತ್ತೈ ಮೃತ ದುರ್ದೈವಿಗಳು.

ಕಮಲಾನಗರದ ಉದ್ಯಮಿ ಅನುಜ್ ಅಗರ್ವಾಲ್ ಶುಕ್ರವಾರ ಬೆಳಗ್ಗೆ ಕುಟುಂಬ ಸಮೇತ ಬುಲಂದ್‌ಶಹರ್‌ನ ಬೈಲೋನ್‌ವಾಲಿ ಮಾತಾ ದೇವಸ್ಥಾನಕ್ಕೆ ತೆರಳಿದ್ದರು. ದರ್ಶನದ ಬಳಿಕ ಪುನಃ ಆಗ್ರಾಕ್ಕೆ ಹಿಂತಿರುಗುತ್ತಿತ್ತು. ಈ ವೇಳೆ ಆಗ್ರಾ - ಅಲಿಗಢ ಹೆದ್ದಾರಿಯಲ್ಲಿ ಅತಿವೇಗದಲ್ಲಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಗಾಳಿಯಲ್ಲಿ ಸುಮಾರು ಏಳು ಅಡಿಗಳಷ್ಟು ಹಾರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಬಳಿಕ 15 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ಅಪಘಾತದ ದೃಶ್ಯ ಬಹಳ ಭೀಕರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲಿಂದ ಬಿದ್ದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಬಾಗಿಲುಗಳನ್ನು ಕಟ್ ಮಾಡಿ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಹಾಗೇ ಮೂವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ. ಕಾರಿನಲ್ಲಿದ್ದ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಹಾರ್ಡ್‌ವೇರ್ ಉದ್ಯಮಿ ಕುಟುಂಬ ಇದಾಗಿದ್ದು, ದೀಪಾವಳಿ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ. ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಇಬ್ಬರ ಪ್ರಾಣ ಉಳಿದಿದೆ. ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾತ್ರಿ ವಾಹನಗಳಲ್ಲಿ ಐದೂ ಮೃತದೇಹಗಳು ಒಂದೊಂದಾಗಿ ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 24 ಗಂಟೆಗಳ ಹಿಂದೆ ಖುಷಿಯಲ್ಲಿದ್ದ ಕುಟುಂಬದಲ್ಲಿ ಶೋಕ ಮಡುಗಟ್ಟಿತ್ತು. ಮೊಮ್ಮಕ್ಕಳನ್ನು ತಬ್ಬಿಕೊಂಡು ಅಳುತ್ತಿದ್ದ ಅಜ್ಜಿಯ ರೋದನೆ ಸ್ಥಳೀಯರಿಗೂ ಕಣ್ಣೀರು ತರಿಸುವಂತಿತ್ತು. ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕುಟುಂಬಸ್ಥರು, ಸಂಬಂಧಿಕರು ಹಾಗೂ ಕಾಲೋನಿಯ ನಿವಾಸಿಗರ ಸಮ್ಮುಖದಲ್ಲಿ ತಡರಾತ್ರಿ ಐವರ ಶವಗಳನ್ನು ಇಲ್ಲಿಯ ಬಲ್ಕೇಶ್ವರ ಘಾಟ್​​ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಇದನ್ನೂ ಓದಿ:ವ್ಯಕ್ತಿಯ ಪ್ರಾಣ ಉಳಿಸುವ ಭರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಆರು ಜನರ ಸಾವು

ABOUT THE AUTHOR

...view details