ಚಂಡೀಗಢ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಟೆದು I.N.D.I.A ಮೈತ್ರಿಕೂಟ ರಚಿಸಿಕೊಂಡು ಅದರ ಭಾಗವಾಗಿ ಒಟ್ಟಾಗಿ ಸ್ಪರ್ಧಿಸಿದ್ದ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿಯುತ್ತಿವೆ. ಕೆಲವು ದಿನಗಳಿಂದ ಉಭಯ ಪಕ್ಷಗಳ ನಡುವೆ ನಡೆಯುತ್ತಿದ್ದ ಹೊಂದಾಣಿಕೆ ಮಾತುಕತೆ ಸೋಮವಾರ ಅಧಿಕೃತವಾಗಿ ಮುರಿದು ಬಿದ್ದಿದೆ.
ಸೀಟು ಹಂಚಿಕೆ ವಿಚಾರವಾಗಿ ಎರಡೂ ಪಕ್ಷಗಳು ಪಟ್ಟು ಬಿಡದ ಹಿನ್ನೆಲೆಯಲ್ಲಿ ಮೈತ್ರಿ ಸಾಧ್ಯವಾಗಿಲ್ಲ. ಭಾನುವಾರದವರೆಗೂ ಮೈತ್ರಿ ಮಾತುಕತೆ ನಡೆದರೂ ಯಾವುದೇ ಫಲಪ್ರದವಾಗಿರಲಿಲ್ಲ. ಸೋಮವಾರ ಆಮ್ ಆದ್ಮಿ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಚುನಾವಣಾ ಪೂರ್ವ ಮೈತ್ರಿ ಕೈಬಿಟ್ಟಿದೆ.
ಎಲ್ಲ ಸ್ಥಾನಗಳಲ್ಲಿ ಸ್ಪರ್ಧೆ:ಪಟ್ಟಿ ಬಿಡುಗಡೆಯ ಬಳಿಕ ಮೈತ್ರಿ ವಿಫಲವಾದ ಬಗ್ಗೆ ಮಾಹಿತಿ ನೀಡಿದ ಪಕ್ಷದ ಹರಿಯಾಣ ರಾಜ್ಯಾಧ್ಯಕ್ಷ ಸುಶೀಲ್ ಗುಪ್ತಾ, ನಮ್ಮ ಪಕ್ಷವು ಎಲ್ಲ 90 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿಲ್ಲ. ಸ್ವತಂತ್ರ ಸ್ಪರ್ಧೆಗಾಗಿ ಮೊದಲಿನಿಂದಲೂ ತಯಾರಿ ನಡೆಸಿದ್ದೆವು. ನಾಮಪತ್ರ ಸಲ್ಲಿಸಲು ಇನ್ನು ನಾಲ್ಕೇ ದಿನ ಬಾಕಿ ಉಳಿದ(ಸೆಪ್ಟೆಂಬರ್ 12) ಕಾರಣ ಸೋಮವಾರ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದರು.
ಕಾಂಗ್ರೆಸ್ ಜೊತೆಗಿನ ಮೈತ್ರಿ ಕುದುರದ ಕಾರಣ, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಎರಡನೇ ಪಟ್ಟಿಯೂ ಬರಲಿದೆ. ಎಎಪಿ ನಾಯಕರು ಕೂಡ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಇಚ್ಛಿಸಿದ್ದು, ಉಳಿದ 70 ಅಭ್ಯರ್ಥಿಗಳನ್ನು ಆದಷ್ಟು ಬೇಗ ಘೋಷಿಸಲಾಗುವುದು ಎಂದು ತಿಳಿಸಿದರು.