ಕರ್ನಾಟಕ

karnataka

ETV Bharat / bharat

ದೆಹಲಿ ಚಲೋ: ಶಂಭು ಗಡಿಯಲ್ಲಿ ನಿತ್ರಾಣಗೊಂಡು ಪಿಎಸ್​ಐ, ಹೃದಯಾಘಾತಕ್ಕೆ ರೈತ ಸಾವು - ಶಂಭು ಗಡಿಯಲ್ಲಿ ಪಿಎಸ್​ಐ ಮೃತ

ಪಂಜಾಬ್​ - ಹರಿಯಾಣ ರೈತರು ನಡೆಸುತ್ತಿರುವ ದೆಹಲಿ ಚಲೋ ಹೋರಾಟದಲ್ಲಿ ಓರ್ವ ಪೊಲೀಸ್​ ಅಧಿಕಾರಿ, ರೈತ ಸಾವಿಗೀಡಾಗಿದ್ದಾರೆ.

ದೆಹಲಿ ಚಲೋ
ದೆಹಲಿ ಚಲೋ

By ETV Bharat Karnataka Team

Published : Feb 17, 2024, 9:02 AM IST

ಚಂಡೀಗಢ:ಎಂಎಸ್​ಪಿ ಕಾನೂನು, ರೈತರಿಗೆ ಪಿಂಚಣಿ ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಂಜಾಬ್​, ಹರಿಯಾಣ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆಯಲ್ಲಿ ಪೊಲೀಸ್​ ಅಧಿಕಾರಿ, ಒಬ್ಬ ರೈತ ಶುಕ್ರವಾರ ಸಾವನ್ನಪ್ಪಿದ್ದಾರೆ.

ಹರಿಯಾಣದ ಶಂಭು ಗಡಿಯಲ್ಲಿ ರೈತ ಪ್ರತಿಭಟನಾಕಾರರು ಬೀಡುಬಿಟ್ಟಿದ್ದು, ಭದ್ರತೆ ನೀಡುತ್ತಿದ್ದ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ ಹೀರಾ ಲಾಲ್​(52) ನಿತ್ರಾಣದಿಂದ ಕುಸಿದು ಬಿದ್ದರೆ, 63 ವರ್ಷದ ರೈತ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣ ಪಿಎಸ್​ಐ ಹೀರಾ ಲಾಲ್​ ಅವರು ಶಂಭು ಗಡಿಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದರು. ಕರ್ತವ್ಯದಲ್ಲಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವೈದ್ಯಕೀಯ ಸಿಬ್ಬಂದಿಯ ಪ್ರಯತ್ನಗಳ ಹೊರತಾಗಿಯೂ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಹರಿಯಾಣ ಪೊಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಸಬ್ ಇನ್ಸ್‌ಪೆಕ್ಟರ್ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ರೈತನಿಗೆ ಹೃದಯಾಘಾತ:ಇನ್ನೊಂದೆಡೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 63 ವರ್ಷದ ರೈತನೋರ್ವ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ನಿವಾಸಿ ಗಿಯಾನ್ ಸಿಂಗ್ ಎಂದು ಗುರುತಿಸಲಾಗಿದೆ. ಶುಕ್ರವಾರ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಪಂಜಾಬ್‌ನ ರಾಜ್‌ಪುರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ರೈತ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ದೆಹಲಿ ಚಲೋ ಮೆರವಣಿಗೆಯಲ್ಲಿ ಭಾಗವಹಿಸಲು ಎರಡು ದಿನಗಳ ಹಿಂದೆ ಶಂಭು ಗಡಿಗೆ ರೈತ ಗಿಯಾನ್​ ಸಿಂಗ್ ಬಂದಿದ್ದರು. ಕಿಸಾನ್ ಮಜ್ದೂರ್ ಮೋರ್ಚಾ(ಕೆಎಂಎಂ) ಘಟಕವಾದ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ ಸದಸ್ಯರಾಗಿದ್ದರು ಎಂದು ತಿಳಿದು ಬಂದಿದೆ.

ಪ್ರತಿಭಟನಾನಿರತ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಮೂರು ಸಭೆಗಳು ವಿಫಲ ಕಂಡಿವೆ. ಭಾನುವಾರ ನಾಲ್ಕನೇ ಸಭೆ ನಿಗದಿಯಾಗಿದ್ದು, ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಿದಲ್ಲಿ ಹೋರಾಟ ಅಂತ್ಯವಾಗುವ ನಿರೀಕ್ಷೆ ಇದೆ. ಶಂಭು ಗಡಿಯನ್ನು ದಾಟಲು ಹೋರಾಟಗಾರರು ಪ್ರಯತ್ನಿಸುತ್ತಿದ್ದು, ಪೊಲೀಸರು ಸಮರ್ಥವಾಗಿ ತಡೆಯುತ್ತಿದ್ದಾರೆ. ಇದು ಸಂಘರ್ಷಕ್ಕೆ ಕಾರಣವಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗುತ್ತಿದೆ.

ಇದನ್ನೂ ಓದಿ:ಕೇಂದ್ರ ಸರ್ಕಾರ - ರೈತರ ಮೂರನೇ ಸಭೆ ನಿರ್ಣಯಗಳಿಲ್ಲದೇ ಮುಕ್ತಾಯ: ಭಾನುವಾರ ಮತ್ತೊಂದು ಸಭೆ

ABOUT THE AUTHOR

...view details