ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದರು. ಈ ಬಗ್ಗೆ ಮಾತನಾಡಿರುವ ಸುಧಾ ಮೂರ್ತಿ, ಬಡವರಿಗಾಗಿ ಕೆಲಸ ಮಾಡಲು ದೊಡ್ಡ ವೇದಿಕೆ ಪಡೆಯುತ್ತಿರುವುದಕ್ಕೆ ಸಂತಸವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ತಮ್ಮ ಕೆಲಸಕ್ಕೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಕೆಲಸವನ್ನು ಗುರುತಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಸುಧಾ ಮೂರ್ತಿ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ. ರಾಷ್ಟ್ರಪತಿಗಳು ತಮ್ಮನ್ನು ಗುರುತಿಸಿರುವುದು ತಮಗೆ ಸಂತಸ ತಂದಿದೆ. ಇನ್ನು ಈ ಆಯ್ಕೆ ನನಗೆ ಹೆಚ್ಚಿನ ಜವಾಬ್ದಾರಿ ನೀಡಿದೆ ಎಂದು ನಾನು ಭಾವಿಸುತ್ತೇನೆ. ಮತ್ತು ಅವರ ಆಯ್ಕೆಯನ್ನು ಸಮರ್ಥಿಸುವ ನಿಟ್ಟಿನಲ್ಲಿ ನನ್ನ ಮಟ್ಟದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ. ಇನ್ನು ವೈಯಕ್ತಿಕವಾಗಿ ಬಡವರಿಗಾಗಿ ಕೆಲಸ ಮಾಡಲು ನಾನು ದೊಡ್ಡ ವೇದಿಕೆಯನ್ನು ಪಡೆಯುತ್ತಿದ್ದೇನೆ ಎಂಬ ಸಂತಸ ಕೂಡಾ ಇದೆ ಎಂದು ಸುದ್ದಿ ಮಾಧ್ಯಮಕ್ಕೆ ಸುಧಾಮೂರ್ತಿ ತಮಗೆ ಆದ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಎದೆಯ ಮೇಲೆ ಸುಧಾ ಮೂರ್ತಿ ಅವರ ಭಾವಚಿತ್ರ ಹಾಕಿಸಿಕೊಂಡ ಅಭಿಮಾನಿ
ಇದು ರಾಜಕೀಯ ಕ್ಷೇತ್ರಕ್ಕೆ ಒಂದು ಹೆಜ್ಜೆ ಎಂದು ಪರಿಗಣಿಸಬಹುದೇ ಎಂದು ಮಾಧ್ಯಮದವರು ಕೇಳಿದಾಗ, ತನ್ನನ್ನು ತಾವು ರಾಜಕಾರಣಿ ಎಂದು ಪರಿಗಣಿಸುವುದಿಲ್ಲ ಹಾಗೂ ರಾಜಕಾರಣಿ ಎಂದು ಪರಿಗಣಿಸಬಹುದು ಎಂದು ನಾನು ಭಾವಿಸುವುದಿಲ್ಲ. ನಾನು ನಾಮ ನಿರ್ದೇಶಿತ ರಾಜ್ಯಸಭಾ ಸದಸ್ಯೆ ಮಾತ್ರ ಎಂದರು. ನನ್ನ ಅಳಿಯ ಇಂಗ್ಲೆಂಡ್ ಪ್ರಧಾನಿಯಾಗಿದ್ದಾರೆ, ಅವರ ರಾಜಕೀಯ ಬೇರೆ, ಇಲ್ಲಿ ನನ್ನ ಕೆಲಸವೂ ವಿಭಿನ್ನವಾಗಿದೆ. ನಾನು ಈಗ ಸರ್ಕಾರಿ ಉದ್ಯೋಗಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.