ಚಂಡೀಗಢ:ಅಯೋಧ್ಯೆಯಲ್ಲಿ ನಾಳೆ (ಜನವರಿ 22 ರಂದು) ಭವ್ಯ ರಾಮಮಂದಿರದಲ್ಲಿ ಪ್ರಭು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇಡೀ ದೇಶವೇ ದಿವ್ಯ ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ಹರಿಯಾಣದಲ್ಲಿ ಶಾಲೆಗಳಿಗೆ ಅರ್ಧದಿನ ರಜೆ ಘೋಷಿಸಲಾಗಿದೆ. ಜೊತೆಗೆ ಅಂದು ಶೂನ್ಯ ದಿನ ಇರಲಿದೆ ಎಂದು ಈಗಾಗಲೇ ಸರ್ಕಾರ ಹೇಳಿದೆ.
ಶಿಕ್ಷಣ ಇಲಾಖೆಯು ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನದಂದು ರಾಜ್ಯದ ಶಾಲೆಗಳಿಗೆ ಅರ್ಧ ದಿನದ ರಜೆ ಘೋಷಿಸಿ, ಹೊಸ ಆದೇಶವನ್ನು ಹೊರಡಿಸಿದೆ. ಇದರ ಪ್ರಕಾರ, ಸರ್ಕಾರಿ ಶಾಲೆಗಳು ಮಧ್ಯಾಹ್ನ 2:30 ರ ವರೆಗೆ ಮುಚ್ಚಿರುತ್ತವೆ. ಆದರೆ, ಶಾಲಾ ಶಿಕ್ಷಕರು ಮತ್ತು ಇತರ ಸಿಬ್ಬಂದಿ ಶಾಲೆಯಲ್ಲೇ ಇರಬೇಕು. ಮಕ್ಕಳು ಬಳಿಕ ಶಾಲೆಗೆ ಬರಬೇಕು ಎಂಬ ಆದೇಶದ ಪ್ರತಿಯನ್ನು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳಿಗೆ ರವಾನಿಸಲಾಗಿದೆ.
7 ಜಿಲ್ಲೆಗಳಲ್ಲಿ ತೀವ್ರ ನಿಗಾ:ನುಹ್ನಲ್ಲಿ ಕಳೆದ ವರ್ಷ ಕೋಮುಗಲಭೆ ನಡೆದ ಹಿನ್ನೆಲೆಯಲ್ಲಿ ಜನವರಿ 22 ರ ಕಾರ್ಯಕ್ರಮಕ್ಕೆ ರಾಜ್ಯದ 7 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನುಹ್, ಗುರುಗ್ರಾಮ್, ಫರಿದಾಬಾದ್, ಪಲ್ವಾಲ್, ಝಜ್ಜರ್, ಯಮುನಾನಗರ ಮತ್ತು ಜಿಂದ್ ಪ್ರದೇಶಗಳು ಸೂಕ್ಷ್ಮ ವಲಯಗಳೆಂದು ಪೊಲೀಸರು ಗುರುತಿಸಿದ್ದಾರೆ. ವಿಶೇಷವಾಗಿ ದೇವಸ್ಥಾನ, ಮಸೀದಿ ಮತ್ತು ಇತರ ಧಾರ್ಮಿಕ ಸ್ಥಳಗಳ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ.