ಕರ್ನಾಟಕ

karnataka

ETV Bharat / bharat

ಜ್ಞಾನವಾಪಿ: ಹಿಂದೂಗಳು ಪೂಜಿಸುತ್ತಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶದ ದುರಸ್ತಿ, ರಕ್ಷಣೆ ಕೋರಿ ಕೋರ್ಟ್​ಗೆ ಅರ್ಜಿ - Vyas Ka Tehkhana

ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿರುವ ಹಿಂದೂಗಳು ಪೂಜಿಸುತ್ತಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶವನ್ನು ದುರಸ್ತಿ ಮತ್ತು ರಕ್ಷಣೆ ಮಾಡಬೇಕೆಂದು ಕೋರಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

gyanvapi-case-hindu-side-files-petition-in-district-court-urges-to-protect-vyas-ka-tehkhana
ಜ್ಞಾನವಾಪಿ: ಹಿಂದೂಗಳು ಪೂಜಿಸುತ್ತಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶದ ದುರಸ್ತಿ, ರಕ್ಷಣೆ ಕೋರಿ ಕೋರ್ಟ್​ಗೆ ಅರ್ಜಿ

By ETV Bharat Karnataka Team

Published : Mar 5, 2024, 4:16 PM IST

Updated : Mar 5, 2024, 4:45 PM IST

ವಾರಾಣಸಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಸಂಕೀರ್ಣದ ನೆಲಮಾಳಿಗೆಯಲ್ಲಿರುವ 'ವ್ಯಾಸ್ ಕಾ ತೆಹ್ಖಾನಾ' ಪ್ರದೇಶವನ್ನು ದುರಸ್ತಿ ಮತ್ತು ರಕ್ಷಣೆ ಮಾಡಬೇಕೆಂದು ಕೋರಿ ಕಾಶಿ ವಿಶ್ವನಾಥ ಟ್ರಸ್ಟ್ ಕಡೆಯಿಂದ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯವು ಮಾರ್ಚ್ 19ರಂದು ವಿಚಾರಣೆ ನಿಗದಿಪಡಿಸಿದೆ.

ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಜ್ಞಾನವಾಪಿ ಮಸೀದಿ ಇದೆ. ಹಿಂದೂ ದೇವಾಲಯದ ಸ್ಥಳದಲ್ಲಿ ಈ ಮಸೀದಿ ನಿರ್ಮಿಸಲಾಗಿದೆ ಎಂಬ ವಾದವನ್ನು ಹಿಂದೂಗಳು ಮಾಡುತ್ತಿದ್ದಾರೆ. ಇದರ ಬಗ್ಗೆ ಕಾನೂನು ಹೋರಾಟ ನಡೆಸಲಾಗುತ್ತಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಹ ಜ್ಞಾನವಾಪಿ ಸಂಕೀರ್ಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸುತ್ತಿದೆ. ಜನವರಿ 31ರಂದು ವಾರಾಣಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುಮತಿ ನೀಡಿದೆ.

ಇದೀಗ ಹಿಂದೂಗಳ ಪೂಜೆಗೆ ಅವಕಾಶ ಮಾಡಿಕೊಟ್ಟಿರುವ ನೆಲಮಾಳಿಗೆಯಲ್ಲಿರುವ 'ವ್ಯಾಸ್ ಕಾ ತೆಹ್ಖಾನಾ' (ಸೆಲ್ಲಾರ್) ದುರಸ್ತಿ ಮತ್ತು ಛಾವಣಿಯ ಮೇಲೆ ಜನರ ಓಡಾಟ ನಿಷೇಧಿಸುವಂತೆ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಈ ಕುರಿತು ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವಭೂಷಣ ಮಿಶ್ರಾ ಅಫಿಡವಿಟ್‌ ದಾಖಲಿಸಿದ್ದಾರೆ. ಪ್ರಾರ್ಥನಾ ಸ್ಥಳದ ಬಳಿ ಇರುವ ಕಲ್ಲಿನ ಗೋಡೆಗಳು ಮತ್ತು ಮೇಲ್ಛಾವಣಿಯು ತುಂಬಾ ಹಳೆಯದಾಗಿದ್ದು, ಶಿಥಿಲವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಭಾವಚಿತ್ರವನ್ನು ಸಹ ಲಗತ್ತಿಸಿ, ನೆಲಮಾಳಿಗೆಯ ಪ್ರಸ್ತುತ ಸ್ಥಿತಿಯ ಬಗ್ಗೆ ನ್ಯಾಯಾಲಯದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಮೇಲ್ಛಾವಣಿಯ ಮೇಲಿನ ಕಲ್ಲುಗಳು ಬಿರುಕು ಬಿಟ್ಟಿದ್ದು, ತಕ್ಷಣ ದುರಸ್ತಿ ಮಾಡಬೇಕಿದೆ. ಜನವರಿ 31ರ ರಾತ್ರಿನೆಲಮಾಳಿಗೆಯಲ್ಲಿ ಪೂಜೆ ಪುನಸ್ಕಾರ ಪ್ರಾರಂಭವಾದ ನಂತರ, ಪ್ರತಿ ಶುಕ್ರವಾರ ಇಲ್ಲಿ ಇದ್ದಕ್ಕಿದ್ದಂತೆ ನಮಾಜ್ ಮಾಡಲು ಗುಂಪು ಹೆಚ್ಚುತ್ತಿದೆ. ಇದರಿಂದಾಗಿ ಛಾವಣಿಯ ಮೇಲೆ ಒತ್ತಡ ಬೀಳುತ್ತಿದೆ. ಫೆ.15ರಂದು ನಮಾಜ್ ವೇಳೆ ನೆರೆದಿದ್ದ ಜನರ ಒತ್ತಡದಿಂದಾಗಿ ಮೇಲ್ಛಾವಣಿ ಕಂಪಿಸಿದೆ. ಮೂರ್ತಿಯ ಪೀಠದ ಪಕ್ಕದಲ್ಲೇ ಕಲ್ಲುಗಳು ಕೆಳಗೆ ಬಿದ್ದಿವೆ. ಹೀಗಾಗಿ ಪೂಜಾರಿ ಒಳಗೆ ಪೂಜೆ ನಡೆಸುವುದು ಸುರಕ್ಷಿತವಲ್ಲ ಎಂಬಂತಾಗಿದ್ದು, ಅಪಾಯದ ಸಂಭವ ಇದೆ. ಪೂಜಾ ಸ್ಥಳದ ಒಳಗಿನ ಮೇಲ್ಛಾವಣಿ ದುರಸ್ತಿ ಅತ್ಯಂತ ಅಗತ್ಯ. ಅಲ್ಲದೇ, ಮೇಲ್ಛಾವಣಿ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವುದನ್ನು ನಿಯಂತ್ರಿಸಬೇಕಿದೆ ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿ:ತಾಜ್​ಮಹಲ್​ನಲ್ಲಿ ಶಿವರಾತ್ರಿಯಂದು ಜಲಾಭಿಷೇಕಕ್ಕೆ ಅವಕಾಶ ನೀಡಿ: ಆಗ್ರಾ ಕೋರ್ಟ್​ಗೆ ಅರ್ಜಿ

Last Updated : Mar 5, 2024, 4:45 PM IST

ABOUT THE AUTHOR

...view details