ನವದೆಹಲಿ:ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಸೋಮವಾರ ಅಧಿಕಾರ ವಹಿಸಿಕೊಂಡರು. ಈ ವೇಳೆ ದೆಹಲಿ ಸಿಎಂ ಕಚೇರಿಯಲ್ಲಿ ತಮ್ಮ ಕುರ್ಚಿಯ ಪಕ್ಕದಲ್ಲಿ ಇನ್ನೊಂದು ಖಾಲಿ ಕುರ್ಚಿಯನ್ನು ಇಟ್ಟುಕೊಂಡಿದ್ದು, ವಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಟೀಕೆಗೆ ಗುರಿಯಾಗಿದೆ.
ಸಿಎಂ ಅತಿಶಿ ಅವರು ಅಧಿಕೃತ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳದೇ ಅದರ ಪಕ್ಕದಲ್ಲಿ ಇನ್ನೊಂದು ಕುರ್ಚಿಯಲ್ಲಿ ಆಸೀನರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಜನರು ಮತ್ತೆ ಆಯ್ಕೆ ಮಾಡಿದ ಬಳಿಕ ಅವರು ಈ ಖಾಲಿ ಕುರ್ಚಿ ಅಲಂಕರಿಸಲಿದ್ದಾರೆ. ಅಲ್ಲಿಯವರೆಗೂ ಈ ಕುರ್ಚಿ ಕಚೇರಿಯಲ್ಲಿ ಇರುತ್ತದೆ ಎಂದು ಹೇಳಿದರು.
ಇದನ್ನು ಟೀಕಿಸಿರುವ ಪ್ರಮುಖ ವಿಪಕ್ಷ ಬಿಜೆಪಿ ಮತ್ತು I.N.D.I.A. ಕೂಟದಲ್ಲಿ ಆಪ್ ಮಿತ್ರಪಕ್ಷವಾಗಿರುವ ಕಾಂಗ್ರೆಸ್ "ಭ್ರಷ್ಟಾಚಾರ ಆರೋಪ ಹೊತ್ತ ವ್ಯಕ್ತಿಗಾಗಿ ಖಾಲಿ ಕುರ್ಚಿ ಇಡುವ ಮೂಲಕ ಸಿಎಂ ಅತಿಶಿ ಅವರು ಸಂವಿಧಾನ ಮತ್ತು ಸಿಎಂ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ" ಎಂದು ಟೀಕಿಸಿವೆ.
ರಿಮೋಟ್ ಕಂಟ್ರೋಲ್ ಸಿಎಂ:ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವಾ ಮಾತನಾಡಿ, "ಅತಿಶಿ ಅವರ ಈ ವರ್ತನೆಯು ಸಾಂವಿಧಾನಿಕ ನಿಯಮಗಳು ಮತ್ತು ಮುಖ್ಯಮಂತ್ರಿ ಹುದ್ದೆಗೆ ಮಾಡಿದ ಘೋರ ಅಪಮಾನ, ಈ ನಡೆ ಆದರ್ಶವಲ್ಲ. ಮುಖ್ಯಮಂತ್ರಿ ಹುದ್ದೆಗೆ ಅವಮಾನ ಮಾಡಿದ್ದಲ್ಲದೇ, ದೆಹಲಿ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರದ ರಿಮೋಟ್ ಕಂಟ್ರೋಲ್ ಆಗಿದ್ದಾರೆಯೇ ಎಂಬುದುನ್ನು ಬಹಿರಂಗಪಡಿಸಬೇಕು" ಎಂದು ಪ್ರಶ್ನಿಸಿದರು.
ಡಮ್ಮಿ ಮುಖ್ಯಮಂತ್ರಿ:ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದ್ರ ಯಾದವ್ ಮಾತನಾಡಿ, "ಕೇಜ್ರಿವಾಲ್ ಅವರಿಗಾಗಿ ಕುರ್ಚಿಯನ್ನು ಖಾಲಿ ಇಡುವ ಮೂಲಕ ನೂತನ ಸಿಎಂ ಅತಿಶಿ ಅವರು "ಡಮ್ಮಿ" ಮುಖ್ಯಮಂತ್ರಿ ಎಂದು ಸಾಬೀತುಪಡಿಸಿದ್ದಾರೆ. ಜೊತೆಗೆ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಯನ್ನು ಶ್ರೀರಾಮನಿಗೆ ಹೋಲಿಸಿರುವುದು ಆಕ್ಷೇಪಾರ್ಹ. ಅತಿಶಿ ಅವರು ಎಲ್ಲ ಮಿತಿಗಳನ್ನು ಮೀರಿ ಡಮ್ಮಿ ಮುಖ್ಯಮಂತ್ರಿ ಎಂದು ತೋರಿಸಿಕೊಂಡಿದ್ದಾರೆ" ಎಂದು ಕಟುವಾಗಿ ಟೀಕಿಸಿದ್ದಾರೆ.
ಅತಿಶಿ ಕೇಜ್ರಿವಾಲ್ ಕೈಗೊಂಬೆ:ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ನೂತನ ಸಿಎಂ ನಡೆಯನ್ನು ಜರಿದಿದ್ದು, "ಆಮ್ ಆದ್ಮಿ ಪಕ್ಷ (ಎಎಪಿ) ಮತ್ತೊಮ್ಮೆ ಸಂವಿಧಾನವನ್ನು ಅವಮಾನ ಮಾಡಿದೆ. ಅತಿಶಿ ಕೈಗೊಂಬೆ ಮುಖ್ಯಮಂತ್ರಿ ಎಂದು ಸಾಬೀತು ಮಾಡಿದ್ದಾರೆ. ಮುಖ್ಯಮಂತ್ರಿ ಇರುವಾಗ ಕಚೇರಿಯಲ್ಲಿ ಖಾಲಿ ಕುರ್ಚಿ ಇಡುವುದರ ಅರ್ಥವೇನು? ಇದು ಕೈಗೊಂಬೆ ಸಿಎಂ ಎಂಬುದನ್ನು ತೋರಿಸುತ್ತದೆ. ಇದು ಸಂವಿಧಾನಕ್ಕೆ ಮಾಡಿದ ಘೋರ ಅವಮಾನ. ದೆಹಲಿಯ ಜನರು ಇದನ್ನು ಅರಿತುಕೊಳ್ಳಬೇಕು" ಎಂದರು.
ಇದನ್ನೂ ಓದಿ:'ಭರತ ಹೊತ್ತ ಹೊರೆಯನ್ನೇ ನಾನಿಂದು ಹೊತ್ತಿದ್ದೇನೆ': ಪಕ್ಕದಲ್ಲಿ ಖಾಲಿ ಕುರ್ಚಿ ಇಟ್ಟು ದೆಹಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಆತಿಶಿ - Atishi Takes Charge As Delhi CM