ನವದೆಹಲಿ: ಮೂರು ಕ್ಯಾನ್ಸರ್ ವಿರೋಧಿ ಔಷಧಿಗಳ ಎಂಆರ್ಪಿಯನ್ನು (ಗರಿಷ್ಠ ಮಾರಾಟ ಬೆಲೆ) ಕಡಿಮೆ ಮಾಡುವಂತೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (ಎನ್ಪಿಪಿಎ)ವು ಔಷಧ ತಯಾರಕರಿಗೆ ನಿರ್ದೇಶನ ನೀಡಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಮಂಗಳವಾರ ತಿಳಿಸಿದೆ. ಸರ್ಕಾರವು ಈ ಔಷಧಿಗಳ ಮೇಲಿನ ಕಸ್ಟಮ್ ಸುಂಕ ತೆರವುಗೊಳಿಸಿದ್ದರಿಂದ ಮತ್ತು ಜಿಎಸ್ಟಿ ದರಗಳನ್ನು ಕಡಿತಗೊಳಿಸಿದ್ದರಿಂದ ಈ ಔಷಧಗಳ ಬೆಲೆ ಇಳಿಕೆಯಾಗಲಿದೆ.
ಎನ್ಪಿಪಿಎ ಅಕ್ಟೋಬರ್ 28ರ ಕಚೇರಿ ಜ್ಞಾಪಕ ಪತ್ರದಲ್ಲಿ ಟ್ರಾಸ್ಟುಜುಮಾಬ್, ಒಸಿಮೆರ್ಟಿನಿಬ್ ಮತ್ತು ಡರ್ವಾಲ್ಯುಮಾಬ್ ಎಂಬ ಮೂರು ಕ್ಯಾನ್ಸರ್ ವಿರೋಧಿ ಔಷಧಿಗಳ ಎಂಆರ್ಪಿಯನ್ನು ಕಡಿಮೆ ಮಾಡುವಂತೆ ಸಂಬಂಧಪಟ್ಟ ಔಷಧ ತಯಾರಕರಿಗೆ ನಿರ್ದೇಶನ ನೀಡಿದೆ.
ಇದು ಕೈಗೆಟುಕುವ ಬೆಲೆಯಲ್ಲಿ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಗೆ ಅನುಗುಣವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೇಂದ್ರ ಬಜೆಟ್ 2024-25ರಲ್ಲಿ, ಕ್ಯಾನ್ಸರ್ನಿಂದ ಬಳಲುತ್ತಿರುವ ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ಔಷಧಿಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರವು ಮೂರು ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗಿತ್ತು. ಇನ್ನು ಈ ಮೂರು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್ಟಿ ದರವನ್ನು ಸರ್ಕಾರ ಶೇಕಡಾ 12ರಿಂದ 5ಕ್ಕೆ ಇಳಿಸಿದೆ.
"ಅದರಂತೆ, ಮಾರುಕಟ್ಟೆಯಲ್ಲಿ ಈ ಔಷಧಿಗಳ ಎಂಆರ್ಪಿಯನ್ನು ಕಡಿಮೆ ಮಾಡಬೇಕು ಮತ್ತು ತೆರಿಗೆ ವಿನಾಯಿತಿ ಮತ್ತು ಸುಂಕ ವಿನಾಯಿತಿ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಬೇಕು" ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.