ನವದೆಹಲಿ:ಜೂನ್ 26ರಿಂದ ಜಾರಿಗೆ ಬರಲಿರುವ ದೂರಸಂಪರ್ಕ ಕಾಯ್ದೆ-2023ರ ಅನುಷ್ಠಾನವಾದರೆ, ಯಾವುದೇ ಆಳುವ ಸರ್ಕಾರವು ತುರ್ತು ಸಮಯದಲ್ಲಿ ಯಾವುದೇ ದೂರಸಂಪರ್ಕ ಸೇವೆ ಅಥವಾ ನೆಟ್‌ವರ್ಕ್‌ಗಳನ್ನು ನಿಯಂತ್ರಿಸುವ ಅಥವಾ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ. ಈ ನಿಯಮಗಳು ಇದೇ ಜೂ. 26ರಂದು ಬಾಗಶಃ ಜಾರಿಗೆ ಬರಲಿವೆ ಕೇಂದ್ರ ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ದೂರಸಂಪರ್ಕ ಕಾಯ್ದೆ 2023ರ ಪ್ರಕಾರ ಸೆಕ್ಷನ್ 1, 2, 10 ರಿಂದ 30, 42 ರಿಂದ 44, 46, 47, 50 ರಿಂದ 58, 61 ಹಾಗೂ 62 ಸೆಕ್ಷನ್‌ಗಳು ಜೂನ್ 26ರಂದು ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ಈಗಾಗಲೇ ತಿಳಿಸಲಾಗಿದೆ. ಅಧಿಸೂಚನೆ ಪ್ರಕಾರ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಅಪರಾಧಗಳ ತಡೆಗಟ್ಟುವಿಕೆಯ ಆಧಾರದ ಮೇಲೆ ಸರ್ಕಾರವು ಟೆಲಿಕಾಂ ಸೇವೆಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು.
ಈ ಕಾಯ್ದೆಯ ಪರಿಣಾಮವಾಗಿ ದೂರಸಂಪರ್ಕ ಕ್ಷೇತ್ರದಲ್ಲಿ ಭಾರತೀಯ ಟೆಲಿಗ್ರಾಫ್ ಆ್ಯಕ್ಟ್, 1885, ಭಾರತೀಯ ವೈರ್‌ಲೆಸ್ ಟೆಲಿಗ್ರಾಫಿ ಕಾಯ್ದೆ 1933 ಮತ್ತು ಟೆಲಿಗ್ರಾಫ್ ವೈರ್ಸ್ (ಅಕ್ರಮವಾಗಿ ಸ್ವಾಧೀನದಲ್ಲಿ ಇರಿಸಿಕೊಳ್ಳುವಿಕೆ) ಕಾಯ್ದೆ 1950ರ ಚೌಕಟ್ಟು ಬದಲಾಗಲಿವೆ.
ಜೂನ್ 26 ರಂದು ಜಾರಿಗೆ ಬರುವ ಈ ನಿಯಮಾವಳಿಗಳ ಅಡಿ ವಿಪತ್ತು ನಿರ್ವಹಣೆ ಸೇರಿದಂತೆ ಯಾವುದೇ ಸಾರ್ವಜನಿಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸುರಕ್ಷತೆ ಹಿತದೃಷ್ಟಿಯಿಂದ ಆಡಳಿತ ನಡೆಸುವ ಸರ್ಕಾರವು ಅಧಿಕೃತ ಘಟಕದಿಂದ ಯಾವುದೇ ದೂರಸಂಪರ್ಕ ಸೇವೆ ಅಥವಾ ದೂರಸಂಪರ್ಕ ಜಾಲವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳಬಹುದು. ವಿದೇಶಗಳೊಂದಿಗಿನ ಸೌಹಾರ್ದ ಸಂಬಂಧ ಅಥವಾ ದೇಶದ ಭದ್ರತೆ ಅಥವಾ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ನಿರ್ದಿಷ್ಟ ಅಥವಾ ಎಲ್ಲ ದೂರಸಂಪರ್ಕ ಸೇವೆಗಳ ಮೇಲಿನ ನಿಯಂತ್ರಣ ಮತ್ತು ನಿರ್ವಹಣೆ ಮಾಡುವ ಅವಕಾಶ ಸರ್ಕಾರಕ್ಕೆ ಇರಲಿದೆ.
ಅಲ್ಲದೇ ಈ ಕಾಯಿದೆ ಪ್ರಕಾರ, ದೂರಸಂಪರ್ಕ ಜಾಲಗಳನ್ನು ಸ್ಥಾಪಿಸಲು ಅಥವಾ ನಿರ್ವಹಿಸಲು, ಸೇವೆಗಳನ್ನು ಒದಗಿಸಲು ಅಥವಾ ಅನುಪಾತದ ಸಾಧನಗಳನ್ನು ಹೊಂದಲು ಬಯಸುವ ಯಾವುದೇ ಟೆಲಿಕಾಂ ಸಂಸ್ಥೆಯು ಸರ್ಕಾರದಿಂದ ಅಧಿಕೃತಗೊಳಿಸಬೇಕಾಗುತ್ತದೆ.
ಹೊಸ ನಿಯಮಗಳ ಜಾರಿಯಿಂದಾಗಿ, ಸಾರ್ವತ್ರಿಕ ಸೇವಾ ಬಾಧ್ಯತೆಯ ನಿಧಿಯು 'ಡಿಜಿಟಲ್ ಭಾರತ್' ನಿಧಿಯಾಗಿ ಮಾರ್ಪಾಡಾಗಲಿದೆ. ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳ ಸ್ಥಾಪನೆಗಷ್ಟೇ ಅಲ್ಲದೆ, ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಿಗೂ ಬಳಸಿಕೊಳ್ಳಬಹುದಾಗಿದೆ. ಜೊತೆಗೆ, ಬಳಕೆದಾರರನ್ನು ಸ್ಪ್ಯಾಮ್ ಮತ್ತು ದುರುದ್ದೇಶದಿಂದ ಕೂಡಿದ ಸಂವಹನಗಳಿಂದ ರಕ್ಷಿಸುವಂತೆ ದೂರಸಂಪರ್ಕ ನೆಟ್‌ವರ್ಕ್‌ಗಳಿಗೆ ಈ ನಿಯಮಗಳು ಆದೇಶಿಸಲಿವೆ.
ಇದನ್ನೂ ಓದಿ:ಮೊಬೈಲ್ ಬಳಕೆದಾರರಿಗೆ ಬಿಗ್ ಶಾಕ್!: ಇನ್ಮುಂದೆ ಫೋನ್ ಸಂಖ್ಯೆಗೂ ನೀವು ಶುಲ್ಕ ಪಾವತಿಸಬೇಕಾಗುತ್ತೆ!? - BIG SHOCK SMARTPHONE USERS