ಹೈದರಾಬಾದ್: ಭಾರತದಲ್ಲಿಯೇ ಮೊದಲ ಬಾರಿಗೆ ಗೂಗಲ್ ಸೆಫ್ಟಿ ಇಂಜಿನಿಯರಿಂಗ್ ಸೆಂಟರ್ (ಜಿಎಸ್ಇಸಿ) ಸ್ಥಾಪನೆಗೆ ಮುಂದಾಗಿದೆ. ಇದಕ್ಕಾಗಿ ಹೈದರಾಬಾದ್ ನಗರವನ್ನು ಆಯ್ಕೆ ಮಾಡಿದೆ. ಏಷ್ಯಾ ಫೆಸಿಫಿಕ್ ಪ್ರದೇಶದಲ್ಲಿ ಟೋಕಿಯೋ ಬಳಿಕ ಸ್ಥಾಪನೆ ಆಗುತ್ತಿರುವ ಮತ್ತು ಜಾಗತಿಕವಾಗಿ ಐದನೇ ಕೇಂದ್ರ ಇದಾಗಿದೆ. ಇದು ವೇಗವಾಗಿ ಬೆಳೆಯುತ್ತಿರುವ ಟೆಕ್ ಉದ್ಯಮದಲ್ಲಿ ಪ್ರಮುಖವಾದ ಬೆಳವಣಿಗೆಯಾಗಿದೆ.
ಗೂಗಲ್ನ ಮುಖ್ಯ ಮಾಹಿತಿ ಅಧಿಕಾರಿ ರಾಯಲ್ ಹನ್ಸೆನ್ ನೇತೃತ್ವದ ನಿಯೋಗ ಈ ಘೋಷಣೆ ಮಾಡಿದೆ. ಬುಧವಾರ ಜೂಬ್ಲಿಹಿಲ್ಸ್ನ ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಐಟಿ ಮತ್ತು ಕೈಗಾರಿಕಾ ಸಚಿವ ಶ್ರೀಧರ್ ಬಾಬು ಭೇಟಿಯಾದ ನಿಯೋಗ, ಈ ಉಪಕ್ರಮ ಸ್ಥಾಪನೆ ಸಂಬಂಧದ ಪ್ರಮುಖ ಒಪ್ಪಂದಕ್ಕೆ ತೆಲಂಗಾಣ ರಾಜ್ಯ ಸರ್ಕಾರದೊಂದಿಗೆ ಸಹಿ ಹಾಕಿದೆ.
ಜಾಗತಿಕ ಸೈಬರ್ ಸೆಕ್ಯೂರಿಟಿ ಹಬ್: ಜಿಎಸ್ಇಸಿ ಹೈದರಾಬಾದ್ ವಿಶಿಷ್ಟ ರೀತಿಯಲ್ಲಿ ಅಂತಾರಾಷ್ಟ್ರೀಯ ಸೈಬರ್ ಸೆಕ್ಯೂರಿಟಿ ಹಬ್ ಆಗಿ ಕಾರ್ಯ ನಿರ್ವಹಿಸಲಿದೆ. ಇದು ಭದ್ರತಾ ಅಭಿವೃದ್ಧಿ ಮತ್ತು ಆನ್ಲೈನ್ ಸುರಕ್ಷತಾ ಉತ್ಪನ್ನಗಳ ಕುರಿತು ನೈಪುಣ್ಯತೆ ಹೊಂದಲಿದೆ. ಅಕ್ಟೋಬರ್ 3 ರಂದು ನಡೆದ 'ಗೂಗಲ್ ಫಾರ್ ಇಂಡಿಯಾ 2024' ಸಮಾವೇಶದಲ್ಲಿ ಕಂಪನಿ ಮೊದಲ ಬಾರಿಗೆ ತನ್ನ ಈ ಯೋಜನೆ ಘೋಷಿಸಿತು. ಅಂದಿನಿಂದ ಅನೇಕ ರಾಜ್ಯಗಳು ಕಂಪನಿಗೆ ಆಹ್ವಾನ ನೀಡಲು ಮುಂದಾಗಿದ್ದವು.
ಅಂತಿಮವಾಗಿ ತೆಲಂಗಾಣ ಸರ್ಕಾರದ ನಿರಂತರ ಪ್ರಯತ್ನದ ಫಲಿತಾಂಶ ರಾಜ್ಯ ಯಶಸ್ವಿಯಾಗಿ, ಈ ಯೋಜನೆ ಸ್ಥಾಪನೆ ಅವಕಾಶ ಪಡೆದಿದೆ. ಈ ಯೋಜನೆಯನ್ನು ಹೈದರಾಬಾದ್ಗೆ ಪಡೆಯುವಲ್ಲಿ ಸಿಎಂ ಕೂಡ ಪ್ರಮುಖ ಪಾತ್ರಹೊಂದಿದ್ದು, ತಮ್ಮ ಅಮೆರಿಕ ಪ್ರವಾಸದಲ್ಲಿ ಅವರು ಗೂಗಲ್ ಪ್ರಮುಖ ಕಚೇರಿಗೆ ಭೇಟಿ ಮಾಡಿ, ಮಾತುಕತೆ ನಡೆಸಿದ್ದರು.