ಮಥುರಾ, ಉತ್ತರಪ್ರದೇಶ:ಜಾರ್ಖಂಡ್‌ನಿಂದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಕನಿಷ್ಠ 25 ವ್ಯಾಗನ್‌ಗಳು ಉತ್ತರ ಪ್ರದೇಶದ ವೃಂದಾವನ ರಸ್ತೆ ನಿಲ್ದಾಣದ ಬಳಿ ಹಳಿ ತಪ್ಪಿವೆ. ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಹಳಿ ತಪ್ಪಿದ ವ್ಯಾಗನ್‌ಗಳನ್ನು ಸರಿಪಡಿಸಿ, ಹಳಿ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ಪ್ರಾಥಮಿಕ ತನಿಖೆ ಪ್ರಕಾರ, ಕಪ್ಲಿಂಗ್ ಮುರಿದಿದ್ದರಿಂದ ಗೂಡ್ಸ್ ಹಳಿ ತಪ್ಪಿದೆ ಎಂದು ಶಂಕಿಸಲಾಗಿದೆ. ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಘಟನೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ವಿಷಯ ತಿಳಿದ ತಕ್ಷಣ ಸ್ಥಳೀಯರು ಭೀತಿಗೊಳಗಾಗಿದ್ದರು. ಆದರೆ ಯಾವುದೇ ಜೀವ ಹಾನಿಯಾಗಿಲ್ಲ ಎಂಬ ಮಾಹಿತಿ ಪಡೆದು ನಿಟ್ಟುಸಿರು ಬಿಟ್ಟರು.
ಹಳಿತಪ್ಪಿ ಮೂರು ರೈಲು ಮಾರ್ಗಗಳನ್ನು ತಡೆದಿದ್ದು, ಮಥುರಾ - ಪಲ್ವಾಲ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆಗ್ರಾದಿಂದ ದೆಹಲಿಗೆ ಮತ್ತು ದೆಹಲಿಯಿಂದ ಆಗ್ರಾಕ್ಕೆ ಪ್ರಯಾಣಿಸುವ ಬಹು ರೈಲುಗಳನ್ನು ಹತ್ತಿರದ ನಿಲ್ದಾಣಗಳಲ್ಲಿ ನಿಲ್ಲಿಸಬೇಕಾಯಿತು.