ಪಂಚಕುಲ (ಹರಿಯಾಣ): ಹರಿಯಾಣದ ರೈಲ್ವೆ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟ ಯುವತಿಯೊಬ್ಬಳು 15 ವರ್ಷಗಳ ನಂತರ ತನ್ನ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾಳೆ. ಹರಿಯಾಣದ ಮಾನವ ಕಳ್ಳಸಾಗಣೆ ವಿರೋಧಿ ಘಟಕದ (ಎಎಚ್ಟಿಯು) ಪ್ರಯತ್ನಗಳಿಂದಾಗಿ ತಾಯಿ-ಮಗಳ ಈ ಪುನರ್ ಮಿಲನ ಸಾಧ್ಯವಾಗಿದೆ. ಸದ್ಯ 22 ವರ್ಷದವರಾಗಿರುವ ನೇಹಾ, ಕೇವಲ 7 ವರ್ಷದವಳಿದ್ದಾಗ ಹರಿಯಾಣದ ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ತನ್ನ ತಾಯಿ ಕವಿತಾ ಅವರಿಂದ ಬೇರ್ಪಟ್ಟಿದ್ದರು.
ಏನಿದು ಘಟನೆ?:2010 ರಲ್ಲಿ ನೇಹಾ ತನ್ನ ತಾಯಿಯೊಂದಿಗೆ ವಾರ್ಧಾದಿಂದ ಹರಿಯಾಣಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ ಈ ಸಂದರ್ಭದಲ್ಲಿ ನೇಹಾ ಪಾಣಿಪತ್ ರೈಲ್ವೆ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದಳು. ನಂತರ ಬಾಲಕಿ ನೇಹಾಳನ್ನು ಪೊಲೀಸರು ಸರ್ಕಾರಿ ಆಶ್ರಮದಲ್ಲಿ ಇರಿಸಿದ್ದರು. ಆದರೆ ಕೆಲ ವರ್ಷಗಳ ನಂತರ ಆ ಆಶ್ರಮ ಮುಚ್ಚಿದ್ದರಿಂದ ಬಾಲಕಿಯನ್ನು ಸೋನಿಪತ್ನ ಮತ್ತೊಂದು ಆಶ್ರಯ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು. ನೇಹಾ ಇದೇ ಆಶ್ರಯ ಕೇಂದ್ರದಲ್ಲಿ ಸುಮಾರು 10 ವರ್ಷದವರೆಗೆ ಇದ್ದಳು.
ಘಟನೆ ಬಗ್ಗೆ ನೇಹಾ ಮನದಾಳ ಹೀಗಿದೆ:ಘಟನೆಯ ಬಗ್ಗೆ ಮಾತನಾಡಿದ ನೇಹಾ, "ನನ್ನ ತಾಯಿ ಎಲ್ಲಿದ್ದಾರೆಂದು ನನಗೆ ತಿಳಿದಿರಲಿಲ್ಲ. ಕುಟುಂಬದ ಜೊತೆ ಇಲ್ಲದೆಯೇ ನಾನು ಬೆಳೆದು ದೊಡ್ಡವಳಾದೆ. ಜೀವನದಲ್ಲಿ ಮತ್ತೊಮ್ಮೆ ನನ್ನ ಕುಟುಂಬಸ್ಥರನ್ನು ನೋಡುತ್ತೇನಾ ಎಂಬ ಬಗ್ಗೆ ಆಗಾಗ ನಾನು ಕೇಳಿಕೊಳ್ಳುತ್ತಿದ್ದೆ." ಎಂದರು.
ನೇಹಾ ಸಿಕ್ಕಿದ್ದು ಹೇಗೆ?:2025 ರಲ್ಲಿ ನೇಹಾ ಪಂಚಕುಲದ ಎಎಚ್ಟಿಯುನ ಎಎಸ್ಐ ರಾಜೇಶ್ ಕುಮಾರ್ ಅವರೊಂದಿಗೆ ಮಾತನಾಡಿದ ನಂತರ ಆಕೆಯ ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಪ್ರಕ್ರಿಯೆ ಆರಂಭವಾಯಿತು. ತನ್ನ ತಾಯಿಯ ಹೆಸರು ಕವಿತಾ ಮತ್ತು ತಂದೆಯನ್ನು ತಾನು ಚಿಚಡು ಎಂದು ಕರೆಯುತ್ತಿದ್ದೆ ಎಂದು ನೇಹಾ ತನಗೆ ನೆನಪಿರುವುದೆಲ್ಲವನ್ನೂ ರಾಜೇಶ್ ಕುಮಾರ್ ಎದುರು ಹಂಚಿಕೊಂಡರು. ಈ ಸುಳಿವುಗಳನ್ನು ಆಧರಿಸಿ ತನಿಖೆ ಕೈಗೊಂಡ ಕುಮಾರ್, 2010 ರಲ್ಲಿ ನೇಹಾ ಅವರ ತಂದೆ ರಾಜೀಂದರ್ ಧೋಲೆ ಅವರು ತನ್ನ ಮಗಳು ಕಾಣೆಯಾಗಿರುವ ಬಗ್ಗೆ ಸಲ್ಲಿಸಿದ ದೂರಿನ ಬಗ್ಗೆ ಮಾಹಿತಿ ಕಲೆ ಹಾಕಿದರು.
ಮಗಳು ಕಾಣೆಯಾದಾಗ ಆಘಾತಕ್ಕೊಳಗಾಗಿದ್ದೆ:"ನನ್ನ ಮಗಳು ಕಾಣೆಯಾದಾಗ ನಾನು ಆಘಾತಕ್ಕೊಳಗಾಗಿದ್ದೆ. ನಾವು ಎಲ್ಲೆಡೆ ಹುಡುಕಿದರೂ ಮಗಳು ಪತ್ತೆಯಾಗಲಿಲ್ಲ. ಆದರೆ, ಈಗ ನಾನು ಆಕೆಯೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದಾಗ ನನ್ನ ಕಣ್ಣುಗಳನ್ನು ನಾನೇ ನಂಬಲಿಲ್ಲ" ಎಂದು ರಾಜಿಂದರ್ ಹೇಳಿದರು. ಆಕೆಯ ತಾಯಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕೂಡ ನೇಹಾಳನ್ನು ಗುರುತು ಹಿಡಿದಿದ್ದಾರೆ.
ಕುಟುಂಬದ ಗುರುತನ್ನು ಖಚಿತಪಡಿಸಿದ ನಂತರ, ರಾಜಿಂದರ್ ಅವರು ನೇಹಾಳ ತಾಯಿಯ ಸಂಬಂಧಿಕರೊಂದಿಗೆ ಸೋನಿಪತ್ಗೆ ಧಾವಿಸಿ ಮಗಳನ್ನು ಮತ್ತೆ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ. ಕಾನೂನು ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ನಂತರ, ನೇಹಾರನ್ನು ಜನವರಿ 15 ರಂದು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ನೇಹಾಳನ್ನು ಕುಟುಂಬದೊಂದಿಗೆ ಸೇರಿಸಿದ್ದಕ್ಕಾಗಿ ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಅವರು ಎಎಚ್ಟಿಯು ತಂಡವನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣ: ಆರೋಪಿ ಅರೆಸ್ಟ್, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಶಂಕೆ - SAIF ALI KHAN ATTACK CASE