ಕನೌಜ್ (ಉತ್ತರ ಪ್ರದೇಶ):ಜಾತ್ರೆಗೆ ತೆರಳಿದ್ದ ಬಾಲಕಿಯ ತಲೆ ಕೂದಲು ಉಯ್ಯಾಲೆ (ಜೋಕಾಲಿ)ಯ ಯಂತ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡ ಘಟನೆ ಕನೌಜ್‌ನ ಮಧೋನಗರ ಗ್ರಾಮದಲ್ಲಿ ಸಂಭವಿಸಿದೆ. ಅನುರಾಧ ಗಾಯಗೊಂಡ ಬಾಲಕಿ.
ಎಲ್ಲರಂತೆ ಜೋಕಾಲಿ ಏರಿದ್ದ ಅನುರಾಧ ಆಟದಲ್ಲಿ ಮಗ್ನರಾಗಿದ್ದಳು. ಈ ವೇಳೆ ಜೋಕಾಲಿಯ ರೋಲರ್ಗೆ ಬಾಲಕಿಯ ತಲೆಗೂದಲು ಅಚಾನಕ್ಕಾಗಿ ಸಿಕ್ಕಿಹಾಕಿಕೊಂಡಿದ್ದು, ಕೂದಲು ಸಹಿತ ತಲೆಬುರುಡೆ ಮೇಲಿನ ಚರ್ಮ ಎದ್ದು ಬಂದಿದೆ. ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ರೋಲರ್ನಲ್ಲಿ ಅವಳ ನೆತ್ತಿ ನೇತಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನೆಸುವಂತಿದೆ. ಹುಲ್ಲಿನ ಹಿಡಿಯಂತೆ ಆಕೆಯ ಎಲ್ಲ ಕೂದಲು ಯಂತ್ರಕ್ಕೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆಯ ಸ್ಥಿತಿ ಗಂಭೀರವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಲಕ್ನೋ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.
ಮಾಧೋನಗರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜಾತ್ರೆ ಏರ್ಪಡಿಸಲಾಗಿತ್ತು. ಜಾತ್ರೆಯಲ್ಲಿ ಹಲವು ಬಗೆಯ ಉಯ್ಯಾಲೆಗಳು ಆಗಮಿಸಿದ್ದವು. ಎಲ್ಲರಂತೆ ಅನುರಾಧ ಕೂಡ ಉಯ್ಯಾಲೆ ಆಡಲು ಹೋಗಿದ್ದಳು. ತೂಗಾಡುತ್ತಿರುವಾಗ ಅನುರಾಧಳ ಕೂದಲು ಉಯ್ಯಾಲೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ರೋಲರ್ಗೆ ಸಿಕ್ಕಿ ಹಾಕಿಕೊಂಡಿದೆ. ತಕ್ಷಣ ಕಿರುಚಲು ಆರಂಭಿಸಿದ್ದು, ಇವಳ ಕೂಗಾಟ ಗಮನಿಸಿದ ಸ್ಥಳೀಯರು, ತಕ್ಷಣ ಜೋಕಾಲಿಯ ಚಕ್ರವನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವಳ ಕೂದಲು ರೋಲರ್ಗೆ ಸಿಕ್ಕಿ ಹಾಕಿಕೊಂಡಿದ್ದವು. ಕೈಯಲ್ಲಿ ಸಿಕ್ಕ ಹಿಡಿ ಹುಲ್ಲಿನಂತೆ ಆಕೆಯ ಎಲ್ಲ ಕೂದಲು ಯಂತ್ರಕ್ಕೆ ಸಿಲುಕಿದ್ದರಿಂದ ಆಕೆಯ ಬೋಳು ತಲೆಯಿಂದ ರಕ್ತ ಸುರಿಯುತ್ತಲೇ ಇತ್ತು. ಬಾಲಕಿಯ ಸ್ಥಿತಿ ನೋಡಿದ ಜನರು ಬೆಚ್ಚಿಬಿದ್ದರೆ, ಯಾರೋ ಈ ಭೀಕರ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.