ನವದೆಹಲಿ:ಲೋಕಸಭೆ ಚುನಾವಣೆಯ 7 ಹಂತಗಳ ಮತದಾನಕ್ಕೆ ಶುಕ್ರವಾರ (ಏಪ್ರಿಲ್ 19) ಅಧಿಕೃತ ಚಾಲನೆ ಸಿಗಲಿದೆ. 18 ರಾಜ್ಯಗಳು 3 ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಬುಧವಾರವೇ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಮೊದಲ ಹಂತದ ಮತದಾನದ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಜಿದ್ದಾಜಿದ್ದಿನ ಕಣಗಳಲ್ಲಿ ಭಾರಿ ವಾಗ್ಬಾಣಗಳನ್ನು ನಾಯಕರು ಹರಿಬಿಟ್ಟಿದ್ದಾರೆ. ಮೊದಲ ಹಂತದ ಕಣದಲ್ಲಿ 8 ಕೇಂದ್ರ ಸಚಿವರು, ಐವರು ಮಾಜಿ ಮುಖ್ಯಮಂತ್ರಿಗಳು, ಓರ್ವ ರಾಜ್ಯಪಾಲರು ಇದ್ದಾರೆ. ಒಟ್ಟಾರೆ 1625 ಅಭ್ಯರ್ಥಿಗಳು ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಅದರಲ್ಲಿ 1490 ಪುರುಷರು, 135 ಮಹಿಳಾ ಅಭ್ಯರ್ಥಿಗಳಿದ್ದಾರೆ. ತಮಿಳುನಾಡಿನ ಕರೂರ್ನ್ಲಿ 54 ಜನರು ಕಣದಲ್ಲಿದ್ದು, ಅತಿ ಹೆಚ್ಚು ಅಭ್ಯರ್ಥಿಗಳಿರುವ ಲೋಕಸಭಾ ಕ್ಷೇತ್ರವಾದರೆ, ನಾಗಾಲ್ಯಾಂಡ್ನ ದಿಬ್ರಗಢದಲ್ಲಿ 3 ಮಾತ್ರ ಸ್ಪರ್ಧಿಸಿದ್ದಾರೆ.
ಯಾವೆಲ್ಲಾ ರಾಜ್ಯಗಳಲ್ಲಿ ಮತದಾನ:ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ರಾಜ್ಯಗಳ ಜೊತೆಗೆ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಲಕ್ಷದ್ವೀಪ, ಪುದುಚೇರಿಯಲ್ಲಿ ಮತದಾನ ನಡೆಯಲಿದೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು:ಮೊದಲ ಹಂತದ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ ,ಜಿತೇಂದ್ರ ಸಿಂಗ್ (ಉಧಂಪುರ), ಕೇಂದ್ರ ಸಚಿವ ನಿತಿನ್ ಗಡ್ಕರಿ (ನಾಗ್ಪುರ) ಚಿರಾಗ್ ಪಾಸ್ವಾನ್ (ಜಮುಯಿ), ನಕುಲ್ ನಾಥ್ (ಚಿಂದ್ವಾರ), ತಮಿಳುನಾಡಿನ ಸೆನ್ಸೇಷನ್ ಕೆ ಅಣ್ಣಾಮಲೈ (ಕೊಯಮತ್ತೂರು), ಎಲ್ ಮುರುಗನ್ (ನೀಲಗಿರಿ). ಮಾಜಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ (ಚೆನ್ನೈ ದಕ್ಷಿಣ), ಪೊನ್ ರಾಧಾಕೃಷ್ಣನ್ (ಕನ್ಯಾಕುಮಾರಿ), ಕನಿಮೊಳಿ ಕರುಣಾನಿಧಿ (ತೂತುಕುಡಿ), ವಿ ವೈತಿಲಿಂಗಂ (ಪುದುಚೇರಿ), ಹರೇಂದ್ರ ಸಿಂಗ್ ಮಲಿಕ್ (ಮುಜಾಫರ್‌ನಗರ), ಕಾರ್ತಿ ಚಿದಂಬರಂ (ಶಿವಗಂಗಾ), ಸಂಜೀವ್ ಬಲ್ಯಾನ್ (ಪಿಲಿತ್ ಪ್ರಸಾದನಗರ), ಮನೋಜ್ ತಿಗ್ಗಾ (ಅಲಿಪುರ್ದುವಾರ್ಸ್) ಮತ್ತು ನಿಸಿತ್ ಪ್ರಮಾಣಿಕ್ (ಕೂಚ್‌ಬೆಹರ್).
4ನೇ ಹಂತ ಮತ್ತು ಆಂಧ್ರಪ್ರದೇಶ ವಿಧಾನಸಭೆ ಮತದಾನಕ್ಕೆ ಅಧಿಸೂಚನೆ ಪ್ರಕಟ:ಲೋಕಸಭೆ ಚುನಾವಣೆಗೆ ಮೇ 13 ರಂದು ನಡೆಯುವ ನಾಲ್ಕನೇ ಹಂತದ ಮತದಾನಕ್ಕೆ ಏಪ್ರಿಲ್ 18 ರಂದು ಅಧಿಸೂಚನೆ ಪ್ರಕಟಿಸಲಾಗಿದೆ. ಗುರುವಾರದಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಲೋಕಸಭೆ ಜೊತೆಗೆ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೂ ಗುರುವಾರವೇ ಅಧಿಸೂಚನೆ ಹೊರಡಿಸಲಾಗಿದೆ.
9 ರಾಜ್ಯಗಳಾದ ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮಬಂಗಾಳ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದರಲ್ಲಿ ಆಂಧ್ರಪ್ರದೇಶದ 25 ಲೋಕಸಭೆ, ವಿಧಾನಸಭೆಯ 175 ಕ್ಷೇತ್ರಗಳಿಗೂ ಒಂದೇ ದಿನ ಮತದಾನ ನಡೆಯಲಿದೆ.