ನವದೆಹಲಿ:2024-25ರ ಮಧ್ಯಂತರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರದ ಸಾಧನೆಗಳು ಮತ್ತು 2047ರ ವೇಳೆಗೆ ಭಾರತವನ್ನು 'ವಿಕ್ಷಿತ್ ಭಾರತ್' ಮಾಡುವ ಯೋಜನೆಗಳ ಮೇಲೆ ಕೇಂದ್ರೀಕರಿಸಿದರು. ತಮ್ಮ ಭಾಷಣದ ನಡು ನಡುವೆ ವಿಕಸಿತ ಭಾರತ, ಪ್ರವಾಸಿ ಭಾರತ, ಅವಕಾಶಗಳ ಭಾರತ, ಭ್ರಷ್ಟಾಚಾರ ಮುಕ್ತ ಭಾರತ ಸೇರಿದಂತೆ ಹಲವು ಸಕಾರಾತ್ಮಕ ಆಶಯಗಳನ್ನು ಸಹ ಹಂಚಿಕೊಂಡರು. ಬಜೆಟ್ ಆರಂಭದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಡಿಜಿಟಲ್ ಮೂಲಸೌಕರ್ಯ ಮತ್ತು ತೆರಿಗೆ ಸುಧಾರಣೆಗಳು ಸೇರಿದಂತೆ ಹಲವು ಆರ್ಥಿಕ ವಿಚಾರಗಳನ್ನು ಪ್ರಸ್ತಾಪಿಸಿದ ಸಚಿವೆ, ಬಳಿಕ ಭವಿಷ್ಯದ ಅರ್ಥ ವ್ಯವಸ್ಥೆಗೆ ಬಂದರು.
ವಿಕ್ಷಿತ್ ಭಾರತ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು "ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್" ಮಂತ್ರದೊಂದಿಗೆ ಅಂತರ್ಗತ ಬೆಳವಣಿಗೆಯತ್ತ ಗಮನ ಹರಿಸಿದೆ. ಅದೇ ರೀತಿ 2047ರ ವೇಳೆಗೆ 'ವಿಕ್ಷಿತ್ ಭಾರತ್' (ಅಭಿವೃದ್ಧಿ ಹೊಂದಿದ ಭಾರತ) ದೃಷ್ಟಿಕೋನಕ್ಕೆ ಬಜೆಟ್ ಅಡಿಪಾಯ ಹಾಕುತ್ತದೆ ಎಂದರು. ನಮ್ಮ ಸರ್ಕಾರವು ಸರ್ವತೋಮುಖ ಅಭಿವೃದ್ಧಿಯತ್ತ ಕೆಲಸ ಮಾಡುತ್ತಿದೆ. ಇದು ಎಲ್ಲ ಜಾತಿಗಳು ಮತ್ತು ಎಲ್ಲ ಹಂತಗಳಲ್ಲಿ ಜನರನ್ನು ಒಳಗೊಳ್ಳುತ್ತದೆ. 2047ರ ವೇಳೆಗೆ ಭಾರತವನ್ನು ವಿಕ್ಷಿತ ಭಾರತವನ್ನಾಗಿ ಮಾಡಲು ಮೋದಿ ನೇತೃತ್ವದ ಸರ್ಕಾರ ಕೆಲಸ ಮಾಡುತ್ತಿದೆ. 'ವಿಕ್ಷಿತ್ ಭಾರತ್'ನ ದೃಷ್ಟಿಯು ಸಮೃದ್ಧ ಭಾರತವಾಗಿದ್ದು, ಪ್ರಕೃತಿಯೊಂದಿಗೆ ಸಾಮರಸ್ಯ, ಆಧುನಿಕ ಮೂಲಸೌಕರ್ಯ ಮತ್ತು ಎಲ್ಲ ನಾಗರಿಕರು ಎಲ್ಲಾ ಪ್ರದೇಶಗಳಿಗೆ ತಮ್ಮ ಸಾಮರ್ಥ್ಯವನ್ನು ತಲುಪಲು ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. ಈ ಮಧ್ಯಂತರ ಬಜೆಟ್ ಅಂತರ್ಗತ ಮತ್ತು ನವೀನವಾಗಿದೆ. ಇದು ನಿರಂತರತೆಯ ವಿಶ್ವಾಸವನ್ನು ಹೊಂದಿದೆ. ಇದು ವಿಕ್ಷಿತ್ ಭಾರತದ ಎಲ್ಲಾ 4 ಸ್ತಂಭಗಳಾದ ಯುವ, ಗರೀಬ್, ಮಹಿಳಾ ಮತ್ತು ಕಿಸಾನ್ ಅನ್ನು ಸಶಕ್ತಗೊಳಿಸುತ್ತದೆ. ಈ ಬಜೆಟ್ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಮಾಡುವ ಭರವಸೆಯನ್ನು ನೀಡುತ್ತದೆ ಎಂದು ಸಚಿವರು ಹೇಳಿದರು.
ಪ್ರವಾಸೋದ್ಯಮ ಮತ್ತು ಹೂಡಿಕೆ ಉತ್ತೇಜನ: ಪ್ರವಾಸೋದ್ಯಮವನ್ನು ಪ್ರಸ್ತಾಪಿಸಿದ ವಿತ್ತ ಸಚಿವೆ, ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸಿ ಕೇಂದ್ರಗಳು ಮತ್ತು ಮೂಲಸೌಕರ್ಯ ಯೋಜನೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದಿದ್ದಾರೆ. ವಿದೇಶಿ ನೇರ ಹೂಡಿಕೆ (ಎಫ್ಡಿಐ) ಒಳಹರಿವು ಗಮನಾರ್ಹ ಹೆಚ್ಚಳವನ್ನು ದಾಖಲಿಸಿದೆ. ಹೆಚ್ಚಿನ ವಿದೇಶಿ ಹೂಡಿಕೆ ಆಕರ್ಷಿಸುವ ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. 60 ಸ್ಥಳಗಳಲ್ಲಿ G20 ಸಭೆಯನ್ನು ಆಯೋಜಿಸಿದ ಯಶಸ್ಸು ಜಾಗತಿಕ ಪ್ರೇಕ್ಷಕರಿಗೆ ಭಾರತದ ವೈವಿಧ್ಯತೆಯನ್ನು ಪ್ರಸ್ತುತಪಡಿಸಿದೆ. ನಮ್ಮ ಆರ್ಥಿಕ ಶಕ್ತಿಯು ದೇಶವನ್ನು ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಆಕರ್ಷಕ ತಾಣವನ್ನಾಗಿ ಪರಿವರ್ತಿಸಿದೆ. ದೇಶದ ಮಧ್ಯಮ ವರ್ಗದವರು ಈಗ ಪ್ರವಾಸ ಮಾಡಲು ಮತ್ತು ಅನ್ವೇಷಿಸಲು ಬಯಸುತ್ತಿದ್ದಾರೆ. ಪ್ರವಾಸೋದ್ಯಮ, ಆಧ್ಯಾತ್ಮಿಕ ಪ್ರವಾಸೋದ್ಯಮ ಸೇರಿದಂತೆ, ಸ್ಥಳೀಯ ಉದ್ಯಮಶೀಲತೆಗೆ ಪ್ರಚಂಡ ಅವಕಾಶಗಳಿವೆ. ಐಕಾನಿಕ್ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೆ ಹೊಂದಾಣಿಕೆಯ ಆಧಾರದ ಮೇಲೆ ಹಣಕಾಸು ಒದಗಿಸಲು ಮತ್ತು ಅವುಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡ್ ಮಾಡಲು ಮತ್ತು ಮಾರಾಟ ಮಾಡಲು ದೀರ್ಘಾವಧಿಯ ಬಡ್ಡಿರಹಿತ ಸಾಲಗಳನ್ನು ರಾಜ್ಯಗಳಿಗೆ ನೀಡಿ ಪ್ರೋತ್ಸಾಹಿಸಲಾಗುವುದು. ಸೌಲಭ್ಯ ಮತ್ತು ಸೇವೆಗಳ ಗುಣಮಟ್ಟದ ಆಧಾರದ ಮೇಲೆ ಕೇಂದ್ರಗಳ ರೇಟಿಂಗ್ಗೆ ಚೌಕಟ್ಟನ್ನು ಸ್ಥಾಪಿಸಲಾಗುವುದು. ಹೆಚ್ಚುವರಿಯಾಗಿ, ಲಕ್ಷದ್ವೀಪ ಸೇರಿದಂತೆ ದೇಶದ ದ್ವೀಪಗಳಲ್ಲಿ ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲಸೌಕರ್ಯ ಮತ್ತು ಸೌಕರ್ಯಗಳಿಗೆ ಯೋಜನೆಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.