ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಅಬ್ಬರ ಜಲ್ಪೈಗುರಿ,ಪಶ್ಚಿಮ ಬಂಗಾಳ: ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಹಲವು ಭಾಗದಲ್ಲಿ ಹಠಾತ್ ಚಂಡಮಾರುತ ಉಂಟಾಗಿ ಮರ ಬಿದ್ದು ಐವರು ಸಾವನ್ನಪ್ಪಿದ್ದಾರೆ. ಜತೆಗೆ 170ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದ್ವಿಜೇಂದ್ರ ನಾರಾಯಣ ಸರ್ಕಾರ್ (52), ಅನಿಮಾ ರಾಯ್ (49), ಯೋಗೆನ್ ರಾಯ್ (70), ಸಮರ್ ರಾಯ್ (64) ಮೃತಪಟ್ಟವರಾಗಿದ್ದಾರೆ.
ಜಲ್ಪೈಗುರಿ ವೈದ್ಯಕೀಯ ಕಾಲೇಜು ಸೌಲಭ್ಯದಲ್ಲಿ ಸುಮಾರು 65 ಜನರನ್ನು ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಇಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಸಿಲಿಗುರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗುತ್ತಿದೆ ಎಂದು ಜಲಪೈಗುರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ರೋಗಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ಪ್ರದೀಪ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನದ ಬಳಿಕ ರಾಜ್ಯದಲ್ಲಿ ಇದ್ದಕ್ಕಿದ್ದಂತೆಯೇ ಚಂಡಮಾರುತ ಉಂಟಾಗಿದೆ. ಪರಿಣಾಮ ಆಲಿಕಲ್ಲು, ಗುಡುಗು ಸಹಿತ ಭೀಕರ ಮಳೆಯಾಗಿದೆ. ಗಾಳಿಯ ರಭಸಕ್ಕೆ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ತಕ್ಷಣವೇ ಜಲ್ಪೈಗುರಿ ಜಿಲ್ಲಾದ್ಯಂತ ನಿನ್ನೆ ಸಂಪೂರ್ಣ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗಿತ್ತು.
ಸಿಎಂ ಮಮತಾ ಬ್ಯಾನರ್ಜಿ ಸಂತಾಪ: ಘಟನೆ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬೇಸರ ವ್ಯಕ್ತಪಡಿಸಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ ಅವರು ಚಂಡಮಾರುತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದಾರೆ. "ಜಲ್ಪೈಗುರಿ-ಮೈನಾಗುರಿ ಪ್ರದೇಶಗಳಲ್ಲಿ ಇಂದು(ನಿನ್ನೆ) ಮಧ್ಯಾಹ್ನ ಹಠಾತ್ ಭಾರೀ ಮಳೆ ಮತ್ತು ಬಿರುಗಾಳಿಯು ಸಾವು ನೋವಿಗೆ ಕಾರಣವಾಗಿದೆ. ಪ್ರಾಣಹಾನಿ ಮತ್ತು ಮನೆ ಹಾನಿಗೊಂಡಿದ್ದಲ್ಲದೇ ಮರಗಳು ಮತ್ತು ವಿದ್ಯುತ್ ಕಂಬಗಳು ಹಾನಿಗೊಳಗಾಗಿದೆ. ಇಂಥ ವಿಪತ್ತು ಬಂದಿರುವುದು ಬಹಳ ದುಃಖ ತಂದಿದೆ. ಜಿಲ್ಲಾ ಮತ್ತು ಬ್ಲಾಕ್ ಆಡಳಿತ, ಪೊಲೀಸ್, ಡಿಎಂಜಿ ಮತ್ತು ಕ್ಯೂಆರ್‌ಟಿ ತಂಡಗಳು ವಿಪತ್ತು ನಿರ್ವಹಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ ಮತ್ತು ಪರಿಹಾರವನ್ನು ಒದಗಿಸುತ್ತವೆ. ಸಂತ್ರಸ್ತ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಜಿಲ್ಲಾಡಳಿತವು ಸಾವನ್ನಪ್ಪಿದ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ಪರಿಹಾರವನ್ನು ನೀಡುತ್ತದೆ. ಸಂತ್ರಸ್ತ ಕುಟುಂಬದೊಂದಿಗೆ ನಾನು ನಿಂತಿದ್ದೇನೆ. ಜಿಲ್ಲಾಡಳಿತವು ನಿರಂತರ ರಕ್ಷಣೆ ನೀಡುತ್ತಿದ್ದು, ಪರಿಹಾರಕ್ಕಾಗಿ ಜಿಲ್ಲಾಡಳಿತವು ಸಾಧ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ನನಗೆ ಖಾತ್ರಿಯಿದೆ" ಭರವಸೆ ನೀಡಿದ್ದಾರೆ.
ಪ್ರಧಾನಿ ರಕ್ಷಣಾ ಭರವಸೆ :ಪ್ರಧಾನಿ ನರೇಂದ್ರ ಮೋದಿ ಚಂಡಮಾರುತದಿಂದಾಗಿ ಒದಗಿದ ಸಾವು - ನೋವುಗಳ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸಂತ್ರಸ್ತರಿಗೆ ಪರಿಹಾರ ರಕ್ಷಣೆ ನೀಡುವಂತೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ, "ಪಶ್ಚಿಮ ಬಂಗಾಳದ ಜಲ್ಪೈಗುರಿ-ಮೈನಾಗುರಿ ಪ್ರದೇಶಗಳಲ್ಲಿ ಸಂಭವಿಸಿದ ಚಂಡಮಾರುತದಿಂದ ಹಾನಿಯಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ. ಸಂತ್ರಸ್ತರಿಗೆ ಸಹಾಯ ಮಾಡುವಂತೆ ನಾನು ಎಲ್ಲಾ ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರನ್ನು ಕೇಳಿಕೊಳ್ಳುತ್ತೇನೆ" ಎಂದು ಪ್ರಧಾನಿ ಹೇಳಿದ್ದಾರೆ.
ವರದಿ ಪ್ರಕಾರ, ಜಿಲ್ಲೆಯ ಕಲ್ಬೋಶಾಖಿ, ಜಲಪೈಗುರಿ ಸದರ್ ಮತ್ತು ಮೈನಾಗೂರಿ ಬ್ಲಾಕ್‌ನಲ್ಲಿ ವ್ಯಾಪಕ ಹಾನಿಯಾಗಿದೆ. ಹೆಚ್ಚು ಹಂಚಿನ ಮನೆಗಳಿಗೆ ಹಾನಿಯಾಗಿದ್ದು, ಗಾಳಿಯ ರಭಸಕ್ಕೆ ನೀರಿನ ಟ್ಯಾಂಕ್ಗಳು ಹಾರಿ ಹೋಗಿವೆ. ಮರಗಳು, ವಿದ್ಯುತ್ ಕಂಬಗಳು ರಸ್ತೆಗೆ ಉರುಳಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇನ್ನು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ನಿರ್ಮಲ್ ಚಂದ್ರ ದಾಸ್ ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭಾನುವಾರ ಬಂದು ಗಾಯಾಳುಗಳನ್ನು ನೋಡಿ ವಿಚಾರಿಸಿದ್ದಾರೆ.
ಇದನ್ನೂ ಓದಿ:ಗೋಡೆ ಕುಸಿದು ಮೂವರು ಸಾವು, ಮೂವರಿಗೆ ಗಂಭೀರ ಗಾಯ - workers Died