ತಿರುನಲ್ವೇಲಿ(ತಮಿಳುನಾಡು): ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಚನಲ್ಲೂರು ರೈಲ್ವೆ ಮೇಲ್ಸೇತುವೆ ಬಳಿ ನಡೆದಿದೆ. ತಿರುನಲ್ವೇಲಿ ಜಿಲ್ಲೆಯ ಗಂಗೈಕೊಂಡನ್ನ ರಾಜಪತಿ ಗ್ರಾಮದ ನಿವಾಸಿಯಾದ ಕಣ್ಣನ್ (45), ಆತನ ಇಬ್ಬರು ಪುತ್ರಿಯರಾದ ಮರೀಶ್ವರಿ (12) ಮತ್ತು ಸಮೀರಾ (7) ಹಾಗೂ ಮಾವ ಆಂಡಾಳ್ (65) ಮೃತ ದುರ್ದೈವಿಗಳು.
ತಚನಲ್ಲೂರು ಉತ್ತರ ಬೈಪಾಸ್‌ನ ಉಲಗಮಮ್ಮನ ದೇವಸ್ಥಾನದ ಬಳಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಚೇರನ್ಮಖಾದೇವಿ ಕಡೆಯಿಂದ ತಚನಲ್ಲೂರು ಪೆಟ್ರೋಲ್ ಡಿಪೋ ಬಳಿ ಬರುತ್ತಿದ್ದ ಡೀಸೆಲ್ ಟ್ಯಾಂಕರ್ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಚನಲ್ಲೂರು ಠಾಣಾ ಪೊಲೀಸರು, ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ನೆಲ್ಲಿ ಮುನ್ಸಿಪಲ್ ಸಂಚಾರ ಠಾಣಾ ಪೊಲೀಸರು ಲಾರಿ ಚಾಲಕ ಗಣೇಶನನ್ನು ಬಂಧಿಸಿ, ಟ್ಯಾಂಕರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ತಿರುನಲ್ವೇಲಿ ಮೆಟ್ರೋಪಾಲಿಟನ್ ಪೊಲೀಸ್ ಕಮಿಷನರ್ ರೂಪೇಶ್ ಕುಮಾರ್ ಮೀನಾ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ತಿರುನೆಲ್ವೇಲಿಯಲ್ಲಿ 27 ಸ್ಥಳಗಳನ್ನು ಹೆಚ್ಚು ಅಪಘಾತ ಪ್ರದೇಶಗಳೆಂದು ಗುರುತಿಸಲಾಗಿದೆ. ಆ ಪ್ರದೇಶಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಶೇ.25 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಸಾವು; 15 ಜನರಿಗೆ ಗಾಯ - ROAD ACCIDENT