ಶ್ರೀನಗರ (ಜಮ್ಮು- ಕಾಶ್ಮೀರ):ಚಂದ್ರ ಮುರಿದು ಬಿದ್ದ ಪ್ರದೇಶ ಎಂದು ಕರೆಯಿಸಿಕೊಳ್ಳುವ ಲಡಾಖ್ ಜಮ್ಮು- ಕಾಶ್ಮೀರದಿಂದ ಇಬ್ಭಾಗಗೊಂಡು ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಭೂಮಿ ಮೇಲಿನ ಎತ್ತರಪ್ರದೇಶವಾದ ಲಡಾಖ್ಗೆ ರಾಜ್ಯ ಮತ್ತು ವಿಶೇಷ ಸ್ಥಾನಮಾನ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆ. ಜುಲೈ 26 ರಂದು ಕಾರ್ಗಿಲ್ ವಿಜಯ್ ದಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್‌ಗೆ ಭೇಟಿ ನೀಡಿದ ಬಳಿಕ ಈ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.
ಕಾರ್ಗಿಲ್ ಯುದ್ಧದ 25 ನೇ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್‌ಗೆ ಭೇಟಿ ನೀಡಿದ ನಂತರ, ಕೇಂದ್ರಾಡಳಿತ ಪ್ರದೇಶದ ಜನರು ತಮ್ಮನ್ನು ಸಂವಿಧಾನದ 6ನೇ ಶೆಡ್ಯೂಲ್ ಸೇರಿಸಬೇಕು. ರಾಜ್ಯದ ಸ್ಥಾನಮಾನವನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಏನೆಲ್ಲಾ ಬೇಡಿಕೆಗಳು:ಎರಡನೇ ಅವಧಿಯ ಮೋದಿ ನೇತೃತ್ವದ ಸರ್ಕಾರದಲ್ಲಿ ಈ ಬಗ್ಗೆ ಲಡಾಖ್‌ನ ರಾಜಕೀಯ ಮತ್ತು ಸಾಮಾಜಿಕ ಪ್ರತಿನಿಧಿಗಳೊಂದಿಗೆ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಲಾಗಿತ್ತು. ಆದರೆ, ಲಡಾಖ್ ಜನರು ತಮ್ಮ ಬೇಡಿಕೆಗಳೊಂದಿಗೆ ಮುಂದುವರಿಸುತ್ತಲೇ ಬಂದಿದ್ದಾರೆ. ಬಿಜೆಪಿ ಹೊರತುಪಡಿಸಿ, ಕೇಂದ್ರಾಡಳಿತ ಪ್ರದೇಶದ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ - ಧಾರ್ಮಿಕ ಸಂಸ್ಥೆಗಳು ಆರನೇ ಶೆಡ್ಯೂಲ್ ಅಡಿಯಲ್ಲಿ ಬುಡಕಟ್ಟು ಸ್ಥಾನಮಾನ, ರಾಜ್ಯ ಸ್ಥಾನಮಾನ, ವಿಧಾನಸಭೆ, ಎರಡು ಸಂಸತ್ ಸ್ಥಾನ ಮತ್ತು ನೇಮಕಾತಿಗಾಗಿ ಪ್ರತ್ಯೇಕ ಸಾರ್ವಜನಿಕ ಸೇವಾ ಆಯೋಗ (ಪಿಎಸ್‌ಸಿ) ಸ್ಥಾಪಿಸಲು ಬೇಡಿಕೆ ಇಡಲಾಗುತ್ತಿದೆ.
ಇಲ್ಲಿನ ರಾಜಕೀಯ ಪಕ್ಷಗಳು (ಬಿಜೆಪಿ ಹೊರತುಪಡಿಸಿ), ಸಾಮಾಜಿಕ, ಧಾರ್ಮಿಕ ಸಂಸ್ಥೆಗಳು ಈ ಬೇಡಿಕೆಗಳಿಗಾಗಿ ಜಂಟಿಯಾಗಿ ಹೋರಾಡಲು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಅನ್ನು ರಚಿಸಿಕೊಂಡಿವೆ. ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ 3 ಲಕ್ಷ ಜನಸಂಖ್ಯೆ ಹೊಂದಿದೆ. ಕೇಂದ್ರ ಸರ್ಕಾರವು ಆಗಸ್ಟ್ 5, 2019 ರಂದು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕ ಮಾಡಿ ಹೊಸ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಿತ್ತು.