ಚೆನ್ನೈ(ತಮಿಳುನಾಡು): ಸಂಕ್ರಾಂತಿ ಭೋಗಿ ಹಬ್ಬದ ಸಂಭ್ರಮದಲ್ಲಿ ಜನರು ಹಳೆಯ ಬಟ್ಟೆಗಳು ಮತ್ತು ಟೈರ್ಗಳನ್ನು ಸುಡುತ್ತಿದ್ದು ದಟ್ಟ ಹೊಗೆ ಆವರಿಸಿ ಚೆನ್ನೈನಲ್ಲಿ ಕಳಪೆ ವೀಕ್ಷಣಾ ಸಾಮರ್ಥ್ಯ ರೂಪುಗೊಂಡಿದೆ. ಇದರ ಪರಿಣಾಮ ಹಲವು ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಸೋಮವಾರ ದೆಹಲಿ ಮತ್ತು ಬೆಂಗಳೂರಿನಿಂದ ಬರಬೇಕಿದ್ದ ವಿಮಾನಗಳು ರದ್ದಾಗಿವೆ. ಇದರ ಜೊತೆಗೆ ಮತ್ತಷ್ಟು ವಿಮಾನ ಹಾರಾಟಗಳು ರದ್ದಾಗಿದ್ದು, 30 ವಿಮಾನಗಳ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಚೆನ್ನೈ ವಿಮಾನ ನಿಲ್ದಾಣದಿಂದ ದುಬೈ, ಅಬು ಧಾಬಿ, ದೋಹಾ, ಮಸ್ಕತ್, ಕುವೈತ್, ಸಿಂಗಾಪೂರ್, ಕೌಲಲಾಂಪುರ್, ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಅಂಡಮಾನ್, ಗೋವಾ, ಪುಣೆ ಮತ್ತು ಕೋಲ್ಕತ್ತಾ ವಿಮಾನಗಳ ಹಾರಾಟದ ಮೇಲೆ ದಟ್ಟ ಹೊಗೆ ಪರಿಣಾಮ ಬೀರಿದೆ.
ಹಳೆಯ ವಸ್ತುಗಳ ಸುಡುವಿಕೆಯಿಂದ ಮಾಲಿನ್ಯ: ಚೆನ್ನೈ ವಿಮಾನ ನಿಲ್ದಾಣದ ಸುತ್ತಮುತ್ತ ಸೇರಿದಂತೆ ನಗರದಲ್ಲಿ ಭೋಗಿ ಸಂಭ್ರಮದಲ್ಲಿ ಹಳೆಯ ಬಟ್ಟೆಗಳು ಹಾಗೂ ಇತರೆ ವಸ್ತುಗಳನ್ನು ಸುಡುವ ಸಂಪ್ರದಾಯವಿದೆ. ಇದರಿಂದಾಗಿ ದಟ್ಟ ಹೊಗೆ ಏರ್ಪಟ್ಟಿದ್ದು, ವೀಕ್ಷಣಾ ಸಾಮರ್ಥ್ಯ ಕುಸಿದಿದೆ.
ಈ ಹೊಗೆ ವಿಮಾನಗಳ ಕಾರ್ಯಾಚರಣೆಯ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಪರಿಸ್ಥಿತಿಯ ಸೂಕ್ಷ್ಮ ಅವಲೋಕನ ನಡೆಸುತ್ತಿದ್ದು, ನಿಲ್ದಾಣದ ಸುತ್ತಮುತ್ತ ಹರಡಿರುವ ಸ್ಮಾಗ್ ಹಿನ್ನೆಲೆಯಲ್ಲಿ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.